ಮೌಂಟ್ ಕಿಲಿಮಾಂಜರೊ ಮೇಲೆ ತಿರಂಗಾ ಹಾರಿಸಿದ ಹುಬ್ಬಳ್ಳಿಯಾಂವ

ಸ್ವಾತಂತ್ರ ಅಮೃತ ಮಹೋತ್ಸವ ಸಂದರ್ಭದಲ್ಲಿ ಜಗತ್ತಿನ ಅತ್ಯಂತ ಎತ್ತರದ ಪರ್ವತಗಳಲ್ಲೊಂದಾದ ಕಿಲಿಮಾಂಜರೊ ಶಿಖರದ ಮೇಲೆ ತಿರಂಗಾ ಹಾರಿಸುವ ಮೂಲಕ ಹುಬ್ಬಳ್ಳಿಯ ವ್ಯಕ್ತಿಯೊಬ್ಬರು ದೇಶಪ್ರೇಮ ಮೆರೆದಿದ್ದಾರೆ.
ಇನ್ನೊಂದು ವಿಶೇಷವೆಂದರೆ ೪೯ವರ್ಷ ವಯಸ್ಸಿನಲ್ಲಿಯೂ ಜಗತ್ತಿನ ಅತ್ಯಂತ ಎತ್ತರದ, ದುರ್ಗಮ ಶಿಖರ ಆಫ್ರಿಕಾ ಖಂಡದ ಕಿಲಿಮಾಂಜರೊ ಪರ್ವತ ಏರುವ ಮೂಲಕ ಸಾಧನೆಗೆ ವಯಸ್ಸು ಅಡ್ಡ ಬರುವುದಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಹುಬ್ಬಳ್ಳಿ ಮೂಲದ ಗಿರೀಶ ಹುಲ್ಲೂರ ಎಂಬವರೇ ಈ ಸಾಹಸಿಗರಾಗಿದ್ದು, ಕಳೆದ ಅಗಸ್ಟ್ ೮ ರಂದು ಹುಬ್ಬಳ್ಳಿಯಿಂದ ಹೊರಟು ಬೆಂಗಳೂರು ಆ ನಂತರ ಶಾರ್ಜಾ ಮೂಲಕ ನೈರೋಬಿ ತಲುಪಿದ ಅವರು, ಹಲವು ಹವಾಮಾನ ವೈಪರೀತ್ಯಗಳನ್ನು ಎದುರಿಸಿಯೂ ೫೮೯೫ ಮೀಟರ್ ಎತ್ತರದ ಕಿಲಿಮಾಂಜರೊ ಪರ್ವತವನ್ನು ಕೇವಲ ೮ ದಿನದಲ್ಲಿ ಏರಿ ಸಾಧನೆ ಮೆರೆದಿದ್ದಾರೆ.
ಬೆಂಗಳೂರಿನ ಬ್ಯಾಂಕಿಂಗ್ ಕ್ಷೇತ್ರದಲ್ಲಿಕಾರ್ಯನಿರ್ವಹಿಸುತ್ತಿರುವ ಗಿರೀಶ್ ಪರ್ವತಾರೋಹಣದಲ್ಲಿ ತ್ರಿವಿಕ್ರಮನಾಗಿದ್ದು, ಪರ್ವತಾರೋಹಣ, ಟ್ರೆಕ್ಕಿಂಗ್ ಬಗ್ಗೆ ಆಳವಾದ ಅಧ್ಯಯನ ಮಾಡಿ ಈಗಾಗಲೇ ರಾಜ್ಯ, ದೇಶದ ವಿವಿಧ ಪರ್ವತ, ಬೆಟ್ಟಗಳನ್ನು ಹತ್ತಿದ್ದಾರೆ ಎಂದು ಅವರ ಸಹೋದರಿ ಸುಹಾಸಿನಿ ದೇಸಾಯಿ ಅವರು ಅತ್ಯಂತ ಹೆಮ್ಮೆಯಿಂದ ಹೇಳುತ್ತಾರೆ.
೯ಲೈವ್ ನ್ಯೂಸ್ ಹುಬ್ಬಳ್ಳಿ