ನನಗೂ ಬಿಜೆಪಿಯಿಂದ ಆಫರ್ ಬಂದಿತ್ತು' : 'ಆಪರೇಷನ್ ಕಮಲ' ಕುರಿತು ಡಿ.ಕೆ ಸುರೇಶ್ ಸ್ಪೋಟಕ ಹೇಳಿಕೆ
ಬೆಂಗಳೂರು : ನನಗೂ ಬಿಜೆಪಿಯವರು ಪಕ್ಷಕ್ಕೆ ಸೇರುವಂತೆ ಆಫರ್ ನೀಡಿದ್ದರು ಎಂದು ಸಂಸದ ಡಿ.ಕೆ ಸುರೇಶ್ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ದೆಹಲಿಯಲ್ಲಿ ಇಡಿ ಅಧಿಕಾರಿಗಳಿಂದ ಡಿಕೆ ಶಿವಕುಮಾರ್ ಸಹೋದರರ ವಿಚಾರಣೆ ಮುಕ್ತಾಯವಾಗಿದ್ದು, ಡಿಕೆ ಸಹೋದರರು ಸತತ 4 ಗಂಟೆಗಳ ಕಾಲ ವಿಚಾರಣೆ ಎದುರಿಸಿದ್ದಾರೆ.
ನಂತರ ಮಾತನಾಡಿದ ಡಿಕೆ ಸುರೇಶ್ ಬಿಜೆಪಿ ಸೇರುವಂತೆ ನನಗೆ ಆಹ್ವಾನ ನೀಡಲಾಗಿತ್ತು, ಇಡಿ, ಐಟಿ ದಾಳಿ ವೇಳೆ ಆಫರ್ ಬಂದಿತ್ತು. ಆದರೆ ಈಗ ಬಂದಿಲ್ಲ, ಇಡಿಯವರು ಕೂಡ ನನಗೆ ಆಹ್ವಾನ ನೀಡಿಲ್ಲ ಎಂದರು. ಇಂದು ಇಡಿ ವಿಚಾರಣೆಗೆ ಹಾಜರಾಗಿದ್ದೇನೆ, ಯಾವಾಗ ಬೇಕಾದರೂ ವಿಚಾರಣೆಗೆ ಬರುವೆ, ಇದಕ್ಕೆ ಸಂಪೂರ್ಣ ಸಹಕಾರ ನೀಡುವೆ ಎಂದರು.
ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಹೋದರ ಡಿ.ಕೆ.ಸುರೇಶ್ ಅವರು ಇಂದು ವಿಚಾರಣೆಗೆ ಹಾಜರಾಗಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಸಂಸದ ಡಿಕೆ ಸುರೇಶ್ ಯಂಗ್ ಇಂಡಿಯಾ ಸಂಸ್ತೆಗೆ ತಾನು ನೀಡಿದ 25 ಲಕ್ಷ ರೂಗಳ ಪ್ರಶ್ನೆಯನ್ನು ಕೇಳಲಾಯಿತು ಎಂದು ಸಂಸದರು ಹೇಳಿದರು. ಅದಲ್ಲದೇ ತಾನು ಕಳೆದ 10 ವರ್ಷಗಳಅವಧಿಯಲ್ಲಿ ನಡೆಸಿರುವ ಹಣಕಾಸು ವ್ಯವಹಾರಗಳ ಬಗ್ಗೆ ದಾಖಲೆಗಳನ್ನು ಇಡಿ ಅಧಿಕಾರಿಗಳು ಕೇಳಿದ್ದಾರೆ ಎಂದು ಹೇಳಿದ ಸುರೇಶ್ ಅವುಗಳನ್ನು ಸಲ್ಲಿಸಲು ಸಮಯಾವಕಾಶ ಕೇಳಿದ್ದೇನೆ ಎಂದರು.
ದೆಹಲಿಯಲ್ಲಿ ಇಡಿ ವಿಚಾರಣೆ ಎದುರಿಸಿದ ಬಳಿಕ ಮಾತನಾಡಿದ ಡಿ.ಕೆ ಶಿವಕುಮಾರ್ 'ಯಂಗ್ ಇಂಡಿಯಾ ಹಣಕಾಸು ವ್ಯವಹಾರದ ಬಗ್ಗೆ ಮಾಹಿತಿ ಕೇಳಿದ್ದರು. ಅದಕ್ಕೆ ಸರಿಯಾದ ಉತ್ತರ ನೀಡಿದ್ದೇನೆ. ನಮ್ಮ ಸಂಸ್ಥೆಗಳ ಕುರಿತು ದಾಖಲೆ ಪತ್ರ ಕೇಳಿದ್ದಾರೆ, ದಾಖಲೆಗಳನ್ನು ಶೀಘ್ರ ಸಲ್ಲಿಸಲಿದ್ದೇನೆ , ನ್ಯಾಷನಲ್ ಹೆರಾಲ್ಡ್ ಬಗ್ಗೆ ಏನೂ ಕೇಳಿಲ್ಲ, ರಾಜಕಾರಣವನ್ನು ರಾಜಕೀಯ ಮೈದಾನದಲ್ಲೇ ಮಾಡಬೇಕು, ಸರ್ಕಾರಿ ಕಚೇರಿಯಲ್ಲಿ ಮಾಡಬಾರದು' ಎಂದು ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.