ಹೊಳೆನರಸೀಪುರ| ಪ್ರಜ್ವಲ್ ಹೆಸರು ಹೇಳದ್ದಕ್ಕೆ ಈ ಗತಿ: ಎ.ಟಿ. ರಾಮಸ್ವಾಮಿ

ಹೊಳೆನರಸೀಪುರ: 'ರಾಷ್ಟ್ರಕಂಡ ಮುತ್ಸದ್ದಿ ರಾಜಕಾರಣಿ ಎಚ್.ಡಿ. ದೇವೇಗೌಡರ ಸ್ಥಿತಿ ಕಂಡು ನನಗೆ ಕಣ್ಣೀರು ಬರುತ್ತದೆ' ಎಂದು ಅರಕಲಗೂಡು ಶಾಸಕ ಎ.ಟಿ. ರಾಮಸ್ವಾಮಿ ಹೇಳಿದರು.
ತಾಲ್ಲೂಕಿನ ಜೋಗಿಕೊಪ್ಪಲು ಗ್ರಾಮದಲ್ಲಿ 8 ಅಲೆಮಾರಿ ಕುಟುಂಬದವರಿಗೆ ಮನೆಗಳ ಹಕ್ಕುಪತ್ರ ವಿತರಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 'ಕಳೆದ ಲೋಕಸಭಾ ಚುನಾವಣೆಗೆ ಹಾಸನದಿಂದ ಸ್ಪರ್ಧಿಸಲು ಬಯಸಿದ್ದ ದೇವೇಗೌಡರಿಗೆ ಅವರ ಅಭಿಪ್ರಾಯವನ್ನು ವ್ಯಕ್ತಪಡಿಸಲು ಅವಕಾಶ ನೀಡದೇ ಅವರನ್ನು ಹಾಸನ ಜಿಲ್ಲೆಯಿಂದ ಹೊರಹಾಕಿದರು' ಎಂದರು.
'ಲೋಕಸಭಾ ಚುನಾವಣೆಗೆ ಮುನ್ನ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ, ಹಾಸನದಿಂದ ಸ್ಪರ್ಧಿಸಲು ದೇವೇಗೌಡರು ಉತ್ಸುಕರಾಗಿದ್ದರು. ಆ ಸಭೆಯಲ್ಲಿ ಪ್ರಜ್ವಲ್ ರೇವಣ್ಣ ಲೋಕಸಭೆಗೆ ಸ್ಪರ್ಧಿಸಲಿ ಎಂದು ಹೇಳಿಸಲು ಕೆಲವರನ್ನು ಸಿದ್ಧ ಮಾಡಿಕೊಂಡಿದ್ದರು. ಎಲ್ಲರೂ ದೇವೇಗೌಡರ ಅಭಿಪ್ರಾಯವನ್ನು ಕೇಳದೇ ಲೋಕಸಭೆಗೆ ಪ್ರಜ್ವಲ್ ರೇವಣ್ಣ ಸ್ಪರ್ಧಿಸಲಿ ಎಂದು ಹೇಳಿದ್ದರು. ಆ ಸಭೆಯಲ್ಲಿ ನಾನು ಪ್ರಜ್ವಲ್ ಹೆಸರನ್ನು ಹೇಳಲಿಲ್ಲ. ಅಂದಿನಿಂದಲೇ ಇವರು ನನ್ನನ್ನು ದೂರ ಇಟ್ಟರು' ಎಂದು ವಿವರಿಸಿದರು.
'ನನ್ನ ಕ್ಷೇತ್ರದ ಮತದಾರರು ನನ್ನ ಜೊತೆಯಲ್ಲಿ ಇರುವವರೆಗೂ ನಾನೇ ಅರಕಲಗೂಡು ಕ್ಷೇತ್ರದ ಶಾಸಕ. 2023 ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಗೆಲ್ಲುತ್ತೇನೆ. ನನ್ನ ಕಾರ್ಯಕರ್ತರು ಯಾವ ಪಕ್ಷದಿಂದ ಸ್ಪರ್ಧಿಸಿ ಎನ್ನುತ್ತಾರೋ ಆ ಪಕ್ಷದಿಂದ ಸ್ಪರ್ಧಿಸುತ್ತೇನೆ' ಎಂದರು.
'ಜೆಡಿಎಸ್ ಪಕ್ಷಕ್ಕೆ ನಮ್ಮ ಮನೆ ಬಾಗಿಲನ್ನು ಮುಚ್ಚಿದ್ದೇನೆ' ಎಂದು ಹೇಳಿದ ಅವರು, 'ಜೆಡಿಎಸ್ ರೈತರ ಪಕ್ಷ ಎನ್ನುತ್ತಾರೆ. ಆದರೆ ಬಗರ್‌ಹುಕುಂ ಸಾಗುವಳಿ ಚೀಟಿ ಕೊಡಬೇಡಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡುತ್ತಾರೆ' ಎಂದರು.
ಗೊಂದಿಹಳ್ಳಿಯಲ್ಲಿ ವಾಸಿಸುತ್ತಿರುವ 8 ಅಲೆಮಾರಿ ಕುಟುಂಬಗಳಿಗೆ ಅರ್ಧ ಎಕರೆ ಸರ್ಕಾರಿ ಭೂಮಿ ಮಂಜೂರು ಮಾಡಿ, ತಲಾ ₹ 1.74 ಲಕ್ಷ ವೆಚ್ಚದಲ್ಲಿ ಮನೆಗಳ ನಿರ್ಮಾಣಕ್ಕೆ ಮಂಜೂರಾತಿ ಪತ್ರ ನೀಡಿದರು.
ಹಳ್ಳಿಮೈಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಶ್, ಆನೆ ಕನ್ನಂಬಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಸಂತಾ, ಬಗರ್ ಹುಕುಂ ಸಾಗುವಳಿ ಕಮಿಟಿಯ ಸದಸ್ಯೆ ನಳಿನಾ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸವಿತಾ ಇದ್ದರು.
'ಅಪವಿತ್ರ ರಾಜಕಾರಣ'
'ಜೆಡಿಎಸ್‌ನವರ ಸಂಚು ನನಗೆ 4 ವರ್ಷಗಳ ಹಿಂದೆಯೇ ಅರ್ಥವಾಗಿತ್ತು. ಇವರು ಒಳ್ಳೆಯವರನ್ನು ಸಹಿಸಲ್ಲ. ಪ್ರಾಮಾಣಿಕವಾಗಿ ಇರುವವರು ಇವರಿಗೆ ಬೇಕಿಲ್ಲ. ಸ್ವಾಭಿಮಾನ ಬಿಟ್ಟು ಅವರ ಮುಂದೆ ಕೈ ಕಟ್ಟಿ, ತೆಲೆ ಕೆರೆಯುತ್ತಾ ನಿಲ್ಲುವವರಿಗೆ ಮಾತ್ರ ಅಲ್ಲಿ ಅವಕಾಶ' ಎಂದು ಎ.ಟಿ. ರಾಮಸ್ವಾಮಿ ಹೇಳಿದರು.
'ನಾನು ಸ್ವಾಭಿಮಾನಿ. ಕ್ಷೇತ್ರದ ಜನರಿಗಾಗಿ ನಾನು ರಾಜಕೀಯ ಮಾಡುತ್ತಿರುವವ. ನನ್ನ ಕೇತ್ರದ ಮತದಾರರೂ ಸ್ವಾಭಿಮಾನಿಗಳು. ಆದರೆ ಕೆಲವು ರಾಜಕಾರಣಿಗಳು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ. ಬೆನ್ನಿಗೆ ಚೂರಿ ಹಾಕುತ್ತಾರೆ. ಸ್ವ ಲಾಭಕ್ಕಾಗಿ ನ್ಯಾಯ, ನೀತಿ ,ಧರ್ಮವನ್ನು ಬಲಿ ಕೊಡುತ್ತಾರೆ. ಸಂಸದರ ಆಯ್ಕೆ ಸರಿ ಆಗಿಲ್ಲ ಎಂದು ನ್ಯಾಯಾಲಯದ ಮೆಟ್ಟಿಲೇರಿದ್ದ ರಾಜಕಾರಣಿಯೊಬ್ಬರಿಗೆ ತಮ್ಮ ಪಕ್ಷದ ಟಿಕೆಟ್ ನೀಡಿ ತಾವೂ ಲಾಭ ಮಾಡಿಕೊಂಡು, ಆ ರಾಜಕಾರಣಿ ಜೊತೆ ಅಪವಿತ್ರ ರಾಜಕಾರಣಕ್ಕೆ ನಾಂದಿ ಹಾಡಿದ್ದಾರೆ' ಎಂದು ಎ. ಮಂಜು ಹಾಗೂ ಪ್ರಜ್ವಲ್ ಅವರ ಹೆಸರು ಹೇಳದೇ ಟೀಕಿಸಿದರು.