ನ್ಯಾಯದೇವತೆ: ಮೊದಲ ಹೆಂಡತಿ ಒಪ್ಪಿದರೆ ಎರಡನೇ ಮದುವೆ ಆಗಬಹುದೇ?
ನಮ್ಮ ತಾಯಿಗೆ ಅವರ ತಾಯಿಯಿಂದ ಅರಿಶಿನ ಕುಂಕುಮಕ್ಕೆ ಎಂದು ಎರಡು ಸೈಟು ಬಂದಿತ್ತು. ಆ ಸೈಟುಗಳನ್ನು ಅವರು ನನಗೆ ರಿಜಿಸ್ಟರ್ ವಿಲ್ ಎಂಟು ವರ್ಷಗಳ ಹಿಂದೆ ಮಾಡಿದ್ದರು. ನಮ್ಮ ತಾಯಿ ತೀರಿಕೊಂಡು ಎರಡು ವರ್ಷ ಆಗಿದೆ. ಈಗ ನಾನು ಖಾತೆ ಬದಲಾವಣೆಗೆ ಅರ್ಜಿ ಹಾಕಿದರೆ ನನ್ನ ತಮ್ಮ ನಮ್ಮ ತಾಯಿ ಆಸ್ತಿಯನ್ನು ಅವನಿಗೆ ಐದು ವರ್ಷಗಳ ಹಿಂದೆ ದಾನಪತ್ರ ಮಾಡಿ ರಿಜಿಸ್ಟರ್ ಮಾಡಿಸಿದ್ದಾರೆ.
ಉತ್ತರ: ವಿಲ್ ಅಸ್ತಿತ್ವಕ್ಕೆ ಬರುವುದು ವಿಲ್ ಮಾಡಿದ ವ್ಯಕ್ತಿ ಸತ್ತ ನಂತರ ಮಾತ್ರ. ತನ್ನ ಜೀವಿತ ಕಾಲದಲ್ಲಿ ತಾನು ವಿಲ್ ಮಾಡಿರುವ ಆಸ್ತಿಯನ್ನೂ ತನ್ನ ಇಚ್ಛೆಯಂತೆ ಉಪಯೋಗಿಸುವ/ ಪರಭಾರೆ ಮಾಡುವ ಅಧಿಕಾರ ಆ ವ್ಯಕ್ತಿಗೆ ಇರುತ್ತದೆ. ನಿಮ್ಮ ತಾಯಿ ನಿಮಗೆ ವಿಲ್ ಮಾಡಿದ್ದರೂ ಸಹ, ಅವರು ಬದುಕಿರುವವರೆಗೆ ಆ ಆಸ್ತಿಯನ್ನು ಪರಭಾರೆ ಮಾಡುವ ಅಧಿಕಾರ ಕಳೆದುಕೊಂಡಿರುವುದಿಲ್ಲ. ಹೀಗಾಗಿ ತಾನೇ ಮಗಳಿಗೆ ವಿಲ್ ಮಾಡಿದ್ದ ಆಸ್ತಿಯನ್ನು ಮುಂದೆ ಮಗನಿಗೆ ದಾನ ಮಾಡಿ ರಿಜಿಸ್ಟರ್ ಮಾಡಿಸುವ ಹಕ್ಕು ಆಕೆಗೆ ಇರುತ್ತದೆ. ದಾನ ಊರ್ಜಿತವಾಗುತ್ತದೆ. ಒಂದು ವೇಳೆ ದಾನವನ್ನು ಮೋಸದಿಂದ ನಿಮ್ಮ ತಮ್ಮ ಮಾಡಿಸಿಕೊಂಡಿದ್ದರೆ ಆಗ ನೀವು ಅದನ್ನು ರದ್ದು ಮಾಡಲು ನ್ಯಾಯಾಲಯದಲ್ಲಿ ಕೇಳಬಹುದು.
ನನಗೆ ಮದುವೆ ಆಗಿ ಇಬ್ಬರು ಬೆಳೆದ ಮಕ್ಕಳಿದ್ದಾರೆ. ಕಳೆದ ಎರಡು ವರ್ಷಗಳಿಂದ ನನಗೆ ಒಬ್ಬ ವಿಧವೆಯ ಪರಿಚಯ ಸ್ನೇಹ ಆಗಿದೆ. ಈಗ ಆಕೆ ನನ್ನನ್ನು ಮದುವೆ ಆಗು ಎಂದು ಒತ್ತಾಯ ಮಾಡುತ್ತಿದ್ದಾಳೆ, ಒಬ್ಬ ವಿಧವೆಗೆ ಜೀವನ ಕೊಟ್ಟಂತ ಭಾಗ್ಯ ಪುಣ್ಯ ಬರುತ್ತದೆ ಎಂದು ಹೇಳಿದಾಗ ನನ್ನ ಹೆಂಡತಿಯೂ ಒಪ್ಪಿದ್ದಾಳೆ. ಈಗ ಅವಳನ್ನು ನಾನು ಮದುವೆ ಆಗುವುದರಲ್ಲಿ ತಪ್ಪು ಇದೆಯೇ? ನಾನು ಸರ್ಕಾರಿ ಕೆಲಸದಲ್ಲಿ ಇದ್ದೇನೆ.
ಉತ್ತರ: ಒಬ್ಬ ಹೆಂಡತಿ ಬದುಕಿರುವಾಗ ಮತ್ತೊಬ್ಬ ಹೆಣ್ಣನ್ನು ಮದುವೆ ಆಗುವುದು ಅಪರಾಧ. ನಿಮಗೆ ಶಿಕ್ಷೆ ಆಗುತ್ತದೆ. ನಿಮ್ಮ ಹೆಂಡತಿ ಒಪ್ಪಿದ್ದರೂ ಸಹ ನೀವು ಆಕೆ ಬದುಕಿರುವವರೆಗೆ ಇನ್ನೊಬ್ಬರನ್ನು ಮದುವೆ ಆಗಬಾರದು. ನೀವು ಮಾಡಬೇಕೆಂದು ಕೊಂಡಿರುವ ಕೆಲಸ ಧರ್ಮ ಪ್ರಕಾರವಾಗಿಯೂ ಕಾನೂನು ಪ್ರಕಾರವಾಗಿಯೂ ತಪ್ಪು. ಆ ವಿಧವೆಗೆ ಸಹಾಯ ಮಾಡಬೇಕೆನ್ನುವ ಉದ್ದೇಶ ಇದ್ದರೆ ನಿಮ್ಮ ಕೈಲಾದ ಸಹಾಯ ಹಾಗೆಯೇ ಮಾಡಿ. ಮದುವೆ ಮಾಡಿಕೊಂಡೇ ಸಹಾಯ ಮಾಡಬೇಕೆಂದಿಲ್ಲ. ಒಂದು ವೇಳೆ ಮದುವೆ ಆದರೆ, ಮುಂದೆ ಆಕೆಯಿಂದಲೋ ಅಥವಾ ನಿಮ್ಮ ಹೆಂಡತಿಯಿಂದಲೋ ಕಾನೂನು ಕ್ರಮ ಶುರು ಆದರೆ ನೀವು ಪಡಬಾರದ ಕಷ್ಟ ಪಡಬೇಕಾಗುತ್ತದೆ ಎನ್ನುವ ಎಚ್ಚರಿಕೆ ಇರಲಿ.
(ಲೇಖಕಿ ಕರ್ನಾಟಕ ಉಚ್ಚ ನ್ಯಾಯಾಲಯದ ಹಿರಿಯ ವಕೀಲರು ಹಾಗೂ ಬೆಂಗಳೂರು ಮಧ್ಯಸ್ಥಿಕೆ ಕೇಂದ್ರದ ಹಿರಿಯ ಮಧ್ಯಸ್ಥಿಕೆಗಾರರು.)