KSRTC: ಮಗುವನ್ನು ದತ್ತು ಪಡೆದ ಕೆಎಸ್ಸಾರ್ಟಿಸಿ ಮಹಿಳೆಯರಿಗೂ ಇನ್ಮುಂದೆ 6 ತಿಂಗಳು Maternity Leave
ಬೆಂಗಳೂರು : ಮಗುವನ್ನು (Children) ಹೆತ್ತು ಹೊತ್ತು ಬೆಳೆಸುವ ಮಹಿಳಾ (Women Employees) ಉದ್ಯೋಗಿಗೆ ಸರ್ಕಾರಿ ಹಾಗೂ ಖಾಸಗಿ ಕಂಪನಿಗಳಲ್ಲೂ 6 ತಿಂಗಳ ಕಾಲ ವೇತನ ಸಹಿತ ಮಾತೃತ್ವ ಅಥವಾ ಹೆರಿಗೆ ರಜೆ (Maternity Leave) ನೀಡುತ್ತಿರುವುದು ನಿಮಗೆ ಗೊತ್ತಿರುವ ವಿಚಾರವೇ. ಆದರೆ, ಇದರ ಜತೆಗೆ ದತ್ತು ತೆಗೆದುಕೊಳ್ಳುವ ತಾಯಿಗೂ (Adoption) ಇದೇ ರೀತಿ ಹೆರಿಗೆ ರಜೆ ನೀಡಬೇಕೆಂದು ಹಲವು ಮಾತುಗಳು ಕೇಳಿಬಂದಿದ್ದವು.
ಯಾರಿಗೆ ಈ ನಿಯಮ ಅನ್ವಯ ಆಗಲ್ಲ
ಈ ಸಂಬಂಧ KSRTC ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ (Shivayogu Kalasad) ಬುಧವಾರ ( ನವೆಂಬರ್ 17, 2021) ಅಧಿಸೂಚನೆ ಹೊರಡಿಸಿದ್ದು, ಮಕ್ಕಳನ್ನು ದತ್ತು ಪಡೆಯುವ ಮಹಿಳಾ ಸಿಬ್ಬಂದಿಗೆ 180 ದಿನಗಳ ಹೆರಿಗೆ ರಜೆ ಮಂಜೂರು ಮಾಡಿದೆ. ಆದರೆ, ಈಗಾಗಲೇ ಇಬ್ಬರು ಜೀವಂತ ಮಕ್ಕಳನ್ನು ಹೊಂದಿರುವವರಿಗೆ ಈ ಸೌಲಭ್ಯ ಲಭ್ಯವಿಲ್ಲ ಎಂಬ ಷರತ್ತನ್ನೂ ವಿಧಿಸಲಾಗಿದೆ.
ಇಲ್ಲಿಯವರೆಗೆ, ಮಕ್ಕಳನ್ನು ದತ್ತು ಪಡೆದ ಪೋಷಕರು ಪ್ರತ್ಯೇಕ ರಜೆಗಳನ್ನು ತೆಗೆದುಕೊಳ್ಳಬೇಕಾಗಿತ್ತು. ಆದರೆ ಈ ಇತ್ತೀಚಿನ ಆದೇಶವು ಜೈವಿಕ ತಾಯಂದಿರಿಗೆ (Mother) ಮಾತ್ರ ನೀಡಲಾದ ಹೆರಿಗೆ ರಜೆಗಳನ್ನು ಪಡೆಯಲು ಈಗ ಮಕ್ಕಳನ್ನು ದತ್ತು ತೆಗೆದುಕೊಳ್ಳುವ ತಾಯಿ ಹಾಗೂ ತಂದೆಗೂ ಅನುವು ಮಾಡಿಕೊಡುತ್ತದೆ.
ದತ್ತು ಪಡೆದ ತಾಯಿ 1 ವರ್ಷದೊಳಗೆ ಅಥವಾ ದತ್ತು ಪಡೆದ ಮಗುವಿಗೆ 1 ವರ್ಷ ತುಂಬುವ ಮೊದಲು ರಜೆ ಪಡೆಯಬಹುದು. ದತ್ತು ಪಡೆದ ಪೋಷಕರನ್ನು ಜೈವಿಕ ಪೋಷಕರಿಗೆ ಸಮಾನವಾಗಿ ಪರಿಗಣಿಸಲು ರಾಜ್ಯ ಸರ್ಕಾರದ ನಿರ್ದೇಶನದಂತೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ದತ್ತು ಪಡೆದ ತಾಯಿಗೆ 180 ದಿನದ ರಜೆ
ಮಹತ್ವದ ಕ್ರಮದಲ್ಲಿ, ಕರ್ನಾಟಕ ಸರ್ಕಾರವು ಮಕ್ಕಳನ್ನು ದತ್ತು ತೆಗೆದುಕೊಳ್ಳುವ ತನ್ನ ಉದ್ಯೋಗಿಗಳಿಗೆ ಜೈವಿಕ ಪೋಷಕರಿಗೆ ಸಮಾನವಾಗಿ ಹೆರಿಗೆ ಮತ್ತು ಪಿತೃತ್ವ ರಜೆಗಳನ್ನು ಪಡೆಯಲು ಈ ಹಿಂದೆ ಆದೇಶವನ್ನು ಪ್ರಕಟಿಸಿತ್ತು.
ಹೊಸ ನಿಯಮಗಳು ಮಗುವನ್ನು ದತ್ತು ಪಡೆದ ತಾಯಂದಿರಿಗೆ 180 ದಿನಗಳ ಹೆರಿಗೆ ರಜೆಯನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ.
ಪೋಷಕರ ಸಮಸ್ಯೆ ಗುರುತಿಸಿದ ರಜೆ
ಉದ್ಯೋಗಿಗಳ ರಜೆಯನ್ನು ನಿಯಂತ್ರಿಸುವ ಹಣಕಾಸು ಇಲಾಖೆಯ ಅಧಿಕಾರಿಗಳ ಪ್ರಕಾರ, ಮೊದಲು ದತ್ತು ಪಡೆದ ಪೋಷಕರು ತಮ್ಮದೇ ಆದ ರಜೆಗಳನ್ನು ಬಳಸಬೇಕಾಗಿತ್ತು. ಹಿಂದಿನ ವ್ಯವಸ್ಥೆಯಲ್ಲಿ, ಮಹಿಳೆಯರಿಗೆ 60 ದಿನಗಳ ಕಾಲ ರಜೆ ನೀಡಲಾಗುತ್ತಿತ್ತು, ಇದರಲ್ಲಿ ಅವರದೇ ಆದ ರಜೆಗಳು ಸೇರಿತ್ತು."ದತ್ತು ಪಡೆದ ಪೋಷಕರಿಗೂ ಮಗುವಿನೊಂದಿಗೆ ಬಾಂಧವ್ಯ ಹೊಂದಲು ಸಮಯ ಬೇಕಾಗುತ್ತದೆ ಎಂದು ಸರ್ಕಾರ ಗುರುತಿಸಿದೆ.
ಕೆಲವು ಸಂದರ್ಭಗಳಲ್ಲಿ ಒಂದೇ ಪೋಷಕರು (Parents) ದತ್ತು ತೆಗೆದುಕೊಳ್ಳುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಎಲ್ಲರಿಗೂ ಹೆರಿಗೆ ರಜೆ ಸೌಲಭ್ಯಗಳನ್ನು ವಿಸ್ತರಿಸುವುದು ಮುಖ್ಯವಾಗಿತ್ತು' ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ವಿವರಿಸಿದರು.
KSRTC ನಿರ್ಧಾರಕ್ಕೆ ಮೆಚ್ಚುಗೆ
ರಾಜ್ಯ ಸರ್ಕಾರವು ಈ ನಿಟ್ಟಿನಲ್ಲಿ ಫೆಬ್ರವರಿ 2020ರಲ್ಲಿ ಮೊದಲು ಸರ್ಕಾರಿ ಆದೇಶ ಹೊರಡಿಸಿತ್ತು. ಅದನ್ನು ಏಪ್ರಿಲ್ 2021ರಲ್ಲಿ ಅಧಿಕೃತ ಗೆಜೆಟ್‌ನಲ್ಲಿ ಪ್ರಕಟಿಸಲಾಗಿತ್ತು. KSRTC ಈಗ ಅದೇ ರೀತಿ ನಿರ್ಧಾರ ತೆಗೆದುಕೊಂಡಿದೆ. ಸರ್ಕಾರದ ಈ ನಿರ್ಧಾರಕ್ಕೆ ಮಹಿಳಾ ಉದ್ಯೋಗಿಗಗಳು ಸಂತಸ ವ್ಯಕ್ತಪಡಿಸಿದ್ದಾರೆ.ಇತ್ತ ಸಾರ್ವಜನಿಕ ವಲಯದಲ್ಲೂ KSRTC ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.