ಬಾಲಕಾರ್ಮಿಕ ಪದ್ದತಿ ನಿಷೇಧ ಕುರಿತ ಸಂಚಾರಿ ಜಾಗೃತಿಗೆ ಡಿಸಿ ಚಾಲನೆ
ಬಾಗಲಕೋಟೆ : ಬಾಲಕಾರ್ಮಿಕ ಪದ್ದತಿ ನಿರ್ಮೂಲನೆಗಾಗಿ ಸರಕಾರ ಜಾರಿಗೆ ತರಲಾದ ವಿವಿಧ ಕಾಯ್ದೆಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಸ್ಥೆ ಹಮ್ಮಿಕೊಂಡ ಜಾಗೃತಿ ಪ್ರಚಾರ ವಾಹನಕ್ಕೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಗುರುವಾರ ಚಾಲನೆ ನೀಡಿದರು.
ಜಿಲ್ಲಾಡಳಿತ ಭವನದ ಮುಖ್ಯ ಆವರಣದಲ್ಲಿ ಸಂಚಾರಿ ಜಾಗೃತಿ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಬಾಲ್ಯಾವಸ್ಥೆಯ ಮತ್ತು ಕಿಶೋರಾವಸ್ಥೆಯ ಬಾಲಕಾರ್ಮಿಕ (ನಿಷೇಧ & ನಿಯಂತ್ರಣ) ಕಾಯ್ದೆ ಹಾಗೂ ಹೊಸ ತಿದ್ದುಪಡಿ ಕಾಯ್ದೆಯಡಿ 14 ರಿಂದ 18 ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ಕ್ಷೇತ್ರದಲ್ಲಿ ದುಡಿಸಿದಲ್ಲಿ ಮಾಲಿಕರಿಗೆ 6 ತಿಂಗಳಿಂದ 2 ವರ್ಷ ಜೈಲು ಶಿಕ್ಷೆ 20 ಸಾವಿರದಿಂದ 50 ಸಾವಿರವರೆಗೆ ದಂಡ ಹಾಗೂ ಎಫ್‍ಐಆರ್ ಸಹ ದಾಖಲಿಸಲಾಗುತ್ತದೆ.
ಈ ನಿಟ್ಟಿನಲ್ಲಿ ಬಾಲಕಾರ್ಮಿಕ ನಿಷೇಧ ಕಾಯ್ದೆ ಕುರಿತು ಸಂಚಾರಿ ವಾಹನದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೇಮಲತಾ ಹುಲ್ಲೂರ, ಜಿಲ್ಲಾ ಕಾರ್ಮಿಕ ಅಧಿಕಾರಿ ಬಿ.ಆರ್.ಜಾದವ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಸ್ಥೆಯ ಯೋಜನಾ ನಿರ್ದೇಶಕ ಸುಧಾಕರ ಬಡಿಗೇರ, ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಶಿವಾನಂದ ಮಾದರ ಸೇರಿದಂತೆ ಇತರರು ಉಪಸ್ಥಿತರಿದ್ದರು.