ಮಧ್ಯಪ್ರದೇಶ: ಏಕಕಾಲದಲ್ಲಿ 5 ಮರಿಗಳಿಗೆ ಜನ್ಮ ನೀಡಿದ ʻಹುಲಿʼ!
ಮಂಡ್ಲಾ: ಮಧ್ಯಪ್ರದೇಶದ ಕನ್ಹಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ (ಕೆಟಿಆರ್) ಹುಲಿಯೊಂದು ಏಕಕಾಲದಲ್ಲಿ ಐದು ಮರಿಗಳಿಗೆ ಜನ್ಮ ನೀಡಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಮಂಡ್ಲಾ ಜಿಲ್ಲೆಯ ಮೀಸಲು ಪ್ರದೇಶದ ಮುಕ್ಕಿ ವಲಯದಲ್ಲಿ ಶನಿವಾರ ಮೊದಲ ಬಾರಿಗೆ ಐದು ಮರಿಗಳೊಂದಿಗೆ ಟಿ-27 ಹೆಸರಿನ ಹುಲಿ ಕಾಣಿಸಿಕೊಂಡಿದೆ ಎಂದು ಕೆಟಿಆರ್ನ ಕ್ಷೇತ್ರ ನಿರ್ದೇಶಕ ಎಸ್ಕೆ ಸಿಂಗ್ ತಿಳಿಸಿದ್ದಾರೆ.
ಸುಮಾರು ಒಂಬತ್ತು ವರ್ಷ ವಯಸ್ಸಿನ ಈ ಹುಲಿ, ಬಹುಶಃ ಕಳೆದ ವರ್ಷ ನವೆಂಬರ್ನಲ್ಲಿ ಮರಿಗಳಿಗೆ ಜನ್ಮ ನೀಡಿದೆ. ಈ ಮರಿಗಳಿಗೆ ಈಗ ಸುಮಾರು ಮೂರು ತಿಂಗಳ ವಯಸ್ಸಾಗಿದೆ ಎಂದು ಕೆಟಿಆರ್ನ ಹಿರಿಯ ವನ್ಯಜೀವಿ ಪಶುವೈದ್ಯ ಸಂದೀಪ್ ಅಗರವಾಲ್ ಹೇಳಿದ್ದಾರೆ.
ಕೆಟಿಆರ್ಗೆ ಬರುವ ಪ್ರವಾಸಿಗರು ಮರಿಗಳೊಂದಿಗೆ ಡಿಜೆ ಎಂದು ಜನಪ್ರಿಯವಾಗಿರುವ ಹುಲಿಯನ್ನು ನೋಡಿ ಉತ್ಸುಕರಾಗಿದ್ದಾರೆ ಎಂದು ಸಿಂಗ್ ಹೇಳಿದರು.
ಅಖಿಲ ಭಾರತ ಹುಲಿ ಅಂದಾಜು ವರದಿ 2018 ರ ಪ್ರಕಾರ, ಮಧ್ಯಪ್ರದೇಶವು 526 ಹುಲಿಗಳಿಗೆ ನೆಲೆಯಾಗಿದೆ. ಇಲ್ಲಿ ದೇಶದ ಅತೀ ಹೆಚ್ಚು ಹುಲಿಗಳು ಈ ರಾಜ್ಯದಲ್ಲಿವೆ.
ದೇಶದಲ್ಲಿ ಹುಲಿ ಗಣತಿ ಕಾರ್ಯ ಕಳೆದ ವರ್ಷ ಪೂರ್ಣಗೊಂಡಿದ್ದು, ಇದೀಗ ವರದಿ ಬರಬೇಕಿದೆ. ಮಧ್ಯಪ್ರದೇಶವು ಕನ್ಹಾ, ಬಾಂಧವಗಢ, ಪೆಂಚ್, ಸತ್ಪುರ ಮತ್ತು ಪನ್ನಾ ಸೇರಿದಂತೆ ಹಲವಾರು ಹುಲಿ ಸಂರಕ್ಷಿತ ಪ್ರದೇಶಗಳನ್ನು ಹೊಂದಿದೆ.