ಪ್ರಧಾನಿ ಪಂಜಾಬ್ ಭೇಟಿ: ಭದ್ರತಾ ಲೋಪದ ಬಗ್ಗೆ ರಾಷ್ಟ್ರಪತಿ ಕಳವಳ

ಪ್ರಧಾನಿ ಪಂಜಾಬ್ ಭೇಟಿ: ಭದ್ರತಾ ಲೋಪದ ಬಗ್ಗೆ ರಾಷ್ಟ್ರಪತಿ ಕಳವಳ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಗುರುವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿಯಾಗಿ ತಮ್ಮ ಪಂಜಾಬ್ ಭೇಟಿಯ ಸಂದರ್ಭದಲ್ಲಿ ಉಂಟಾದ ಭದ್ರತಾ ಲೋಪದ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಪ್ರಧಾನಿ ಸುರಕ್ಷತೆಯ ವಿಚಾರದಲ್ಲಿ ಉಂಟಾದ ಗಂಭೀರ ಭದ್ರತಾ ಲೋಪದ ಕುರಿತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕಳವಳ ವ್ಯಕ್ತಪಡಿಸಿದರು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇಂದು ರಾಷ್ಟ್ರಪತಿ ಭವನದಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ನಿನ್ನೆ (ಬುಧವಾರ) ಪಂಜಾಬ್‌ನಲ್ಲಿ ಉಂಟಾದ ಭದ್ರತಾ ಲೋಪದ ಕುರಿತು ಖುದ್ದಾಗಿ ಮಾಹಿತಿ ಪಡೆದರು. ಈ ವೇಳೆ ರಾಷ್ಟ್ರಪತಿ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ರಾಷ್ಟ್ರಪತಿಗಳ ಕಾರ್ಯದರ್ಶಿ ತಿಳಿಸಿದ್ದಾರೆ. 

ಈ ಮೊದಲು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಸಹ ಪ್ರಧಾನಿ ಅವರೊಂದಿಗೆ ಸಂಭಾಷಣೆ ಮಾಡಿ ಭದ್ರತಾ ಲೋಪದ ಕುರಿತು ಕಳವಳ ವ್ಯಕ್ತಪಡಿಸಿದ್ದರು.

ಪಂಜಾಬ್‌ನ ಫಿರೋಜ್‌ಪುರದಲ್ಲಿ ನಡೆಯಬೇಕಿದ್ದ ಚುನಾವಣಾ ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ರಸ್ತೆ ಮಾರ್ಗದಲ್ಲಿ ಹೋಗುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ರಸ್ತೆತಡೆ ಕಾರಣ ಮೇಲ್ಸೇತುವೆಯಲ್ಲಿ 15ರಿಂದ 20 ನಿಮಿಷ ಸಿಲುಕಿದ್ದರು. ಮೋದಿ ಅವರ ಪಂಜಾಬ್ ಭೇಟಿಯನ್ನು ವಿರೋಧಿಸಿ ರೈತ ಸಂಘಟನೆಯು ರಸ್ತೆತಡೆ ನಡೆಸಿತ್ತು. ಇದರಿಂದಾಗಿ ಪ್ರಧಾನಿ ತಮ್ಮ ಕಾರ್ಯಕ್ರಮವನ್ನು ರದ್ದುಗೊಳಿಸಿ ವಾಪಸ್ ಆಗಿದ್ದರು.

ಪಂಜಾಬ್ ಸರ್ಕಾರದಿಂದ ಭಾರಿ ಭದ್ರತಾ ಲೋಪ ಉಂಟಾಗಿದೆ ಎಂದು ಆರೋಪಿಸಲಾಗಿದೆ. ಆದರೆ ಈ ಆರೋಪಗಳನ್ನೆಲ್ಲ ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ನಿರಾಕರಿಸಿದ್ದಾರೆ. ಅಲ್ಲದೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ.