ಕೋವಿಡ್ ನಿಂದ ಮೃತಪಟ್ಟವರ ಕುಟುಂಬ ಸದಸ್ಯರಿಗೆ ಪರಿಹಾರ ಕೊಡಿ: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶ

ಕೋವಿಡ್ ನಿಂದ ಮೃತಪಟ್ಟವರ ಕುಟುಂಬ ಸದಸ್ಯರಿಗೆ ಪರಿಹಾರ ಕೊಡಿ: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶ

ನವದೆಹಲಿ: ಕೋವಿಡ್-19ನಿಂದ ಮೃತಪಟ್ಟ ಕುಟುಂಬ ಸದಸ್ಯರಿಗೆ ಪರಿಹಾರ ನೀಡಿ ಎಂದು ಸುಪ್ರೀಂ ಕೋರ್ಟ್ ಬುಧವಾರ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿದ್ದು, ಈ ಸಂಬಂಧ ಮಾರ್ಗಸೂಚಿಗಳನ್ನು ಹೊರಡಿಸುವಂತೆ ಯೂನಿಯನ್ ಆಫ್ ಇಂಡಿಯಾಗೆ ಆದೇಶ ಹೊರಡಿಸಿದೆ.

ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ನೇತೃತ್ವದ ಮೂವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠ ಇಂದು ತೀರ್ಪು ಪ್ರಕಟಿಸಿ, ಕೋವಿಡ್-19 ನಿಂದ ಮೃತಪಟ್ಟವರ ಕುಟುಂಬ ಸದಸ್ಯರಿಗೆ ನೀಡಬಹುದಾದ ಪರಿಹಾರದ ಮೊತ್ತವನ್ನು ಅಂದಾಜು ಮಾಡಿ 6 ವಾರಗಳೊಳಗೆ ನೀಡುವಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಆದೇಶ ನೀಡಿದೆ.

ವಿಪತ್ತು ನಿರ್ವಹಣಾ ಕಾಯ್ದೆಯ ಸೆಕ್ಷನ್ 12 ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಡೆಯಿಂದ ಶಾಸನಬದ್ಧ ಬಾಧ್ಯತೆಯನ್ನು ಹೊಂದಿದೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.ಅಂತಹ ಕನಿಷ್ಠ ಪರಿಹಾರವು ಸೆಕ್ಷನ್ 12 ರ ಪ್ರಕಾರ ಎಕ್ಸ್ ಗ್ರೇಷಿಯಾ ನೆರವನ್ನು ಒಳಗೊಂಡಿರುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಸೆಕ್ಷನ್ 12 ಕಡ್ಡಾಯ ನಿಬಂಧನೆಯಲ್ಲ ಎಂಬ ಕೇಂದ್ರ ಸರ್ಕಾರದ ವಾದವನ್ನು ನ್ಯಾಯಾಲಯ ತಿರಸ್ಕರಿಸಿದ್ದು, ಸೆಕ್ಷನ್ 12 ಎಂಬ ಪದ ಬಳಕೆಯನ್ನು ಒಪ್ಪಿಕೊಂಡಿದೆ.

ಆದರೆ, ಇಂತಿಷ್ಟೇ ಮೊತ್ತ ಪರಿಹಾರ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಲು ಸಾಧ್ಯವಿಲ್ಲ, ಪರಿಹಾರವಾಗಿ ಎಷ್ಟು ಮೊತ್ತ ನೀಡಬಹುದು ಎಂದು ಪರಿಶೀಲಿಸಿ ಸೂಚಿಸಬೇಕೆಂದು ಮಾರ್ಗಸೂಚಿ ಹೊರಡಿಸುವಂತೆ ಯೂನಿಯನ್ ಆಫ್ ಇಂಡಿಯಾಕ್ಕೆ ಆದೇಶ ನೀಡಿದೆ.