ಕ್ಷೇತ್ರದ ಸಂಸ್ಕೃತಿಯ ಸೊಬಗಿಗೆ ಮನಸೋತಿದೇನೆ; ಶಾಸಕಿ ಲಕ್ಷ್ಮೀ ಹೆಬ್ಬಾಳಕರ
ಬೆಳಗಾವಿ: ಕ್ಷೇತ್ರದ ಪ್ರತಿಯೊಂದು ಹಳ್ಳಿ ನಮ್ಮ ಮನಸೂರೆಗೊಳ್ಳುತ್ತವೆ. ಯಾವ ಹಳ್ಳಿಗೆ ಹೋದರೂ ಅಲ್ಲಿಯ ಸಂಸ್ಕೃತಿ ಆಚಾರ- ವಿಚಾರಕ್ಕೆ ಮನಸೋತಿದ್ದೇನೆ. ವೈವಿಧ್ಯತೆ ಹಾಗೂ ಬಹು ಸಂಸ್ಕೃತಿಯೇ ಬೆಳಗಾವಿ ಗ್ರಾಮೀಣ ಕ್ಷೇತ್ರದ ಸೊಬಗು ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ತಾಲೂಕಿನ ಬೆಳಗುಂದಿ ಗ್ರಾಮದ ಶ್ರೀ ಬ್ರಹ್ಮಲಿಂಗ ಯುವಕ ಮಂಡಳದವರು ಆಯೋಜಿಸಿದ್ದ ಭವ್ಯ ಚಕ್ಕಡಿ ಶರ್ಯತ್ತು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಕ್ಷೇತ್ರದ ಯಾವುದೇ ಭಾಗಕ್ಕೆ ಹೋದರೂ ಒಂದೊಂದು ವಿಶೇಷತೆ, ವಿಭಿನ್ನತೆ ಇದೆ. ನಡೆ, ನುಡಿ, ಆಹಾರ ಪದ್ಧತಿ, ಸಂಸ್ಕೃತಿ, ವಸ್ತ್ರ ವಿನ್ಯಾಸ, ಆಟಗಳು ಸೇರಿದಂತೆ ಎಲ್ಲವೂ ವಿಶೇಷವಾಗಿವೆ. ಹೀಗಾಗಿಯೆ ನನಗೆ ಕ್ಷೇತ್ರದಲ್ಲಿ ಎಷ್ಟೇ ಓಡಾಡಿದರೂ ಆಯಾಸ ಎನ್ನುವುದೇ ಇಲ್ಲ. ಇಲ್ಲಿನ ಜನರ ಮನಸ್ಸು ಅಷ್ಟೇ ಮೃದುವಾದದ್ದು.
ಒಂದು ಮಾತಿನಿಂದ ಎದುರಿಗಿದ್ದವರ ಮನಸ್ಸು ಗೆಲ್ಲುವ ನಿಪುಣತೆ ಇಲ್ಲಿಯ ಜನರಲ್ಲಿದೆ. ಹೀಗಾಗಿ ಕ್ಷೇತ್ರ ಸದಾ ನನ್ನನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ ಎಂದು ಕೊಂಡಾಡಿದರು. ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುವುದರಲ್ಲಿ ನನಗೆ ಎಲ್ಲಿಲ್ಲದ ಉತ್ಸಾಹ. ಇದಕ್ಕೆ ಜನರ ಪ್ರೀತಿ, ಪ್ರೋತ್ಸಾಹ, ಮನೆ ಮಗಳಂತೆ ಕಾಣುವ ಪರಿ ಕಾರಣ. ಬೇರೆ ಯಾವ ಶಾಸಕರಿಗೆ ಇಂತಹ ಸಜ್ಜನರು ಸಿಗುತ್ತಾರೋ ಇಲ್ಲವೋ ಗೊತ್ತಿಲ್ಲ, ಆದರೆ ನಾನಂತೂ ಈ ವಿಷಯದಲ್ಲಿ ಧನ್ಯ ಎಂದು ಹೆಬ್ಬಾಳಕರ ಹೇಳಿದರು.
ಮುಖಂಡರಾದ ಯಲ್ಲಪ್ಪ ಡೇಕೋಳ್ಕರ, ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ, ಶಿವಾಜಿ ಬೋಕಡೆ, ಬಾಳು ದೇಸೂರಕರ, ಸುರೇಶ ಕೀಣೆಕರ, ಮನೋಹರ ಬೆಳಗಾಂವಕರ, ಗುರವ ಸೋಮನಗೌಡ, ದತ್ತಾ ಪಾಟೀಲ, ಪ್ರಹ್ಲಾದ ಚಿರಮುರ್ಕರ, ಪಸಾದ ಬೋಕಡೆ ಇತರರು ಇದ್ದರು.