ಭಾರತದ ಆ ಒಬ್ಬ ಆಟಗಾರ SA20 ಲೀಗ್‌ನಲ್ಲಿ ಆಡಬೇಕು ಎಂದು ಒತ್ತಾಯಿಸಿದ ಐಡೆನ್ ಮಾರ್ಕ್ರಮ್

ಭಾರತದ ಆ ಒಬ್ಬ ಆಟಗಾರ SA20 ಲೀಗ್‌ನಲ್ಲಿ ಆಡಬೇಕು ಎಂದು ಒತ್ತಾಯಿಸಿದ ಐಡೆನ್ ಮಾರ್ಕ್ರಮ್

ಪಿಎಲ್ 2023ರ ಆವೃತ್ತಿಗೂ ಮುನ್ನ ಸನ್‌ರೈಸರ್ಸ್ ಹೈದರಾಬಾದ್ ತಂಡ ತನ್ನ ನೂತನ ನಾಯಕನನ್ನು ಘೋಷಣೆ ಮಾಡಿದೆ. ದಕ್ಷಿಣ ಆಫ್ರಿಕಾದ ಆಟಗಾರ ಐಡೆನ್ ಮಾರ್ಕ್ರಮ್ ಈ ಬಾರಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಮುನ್ನಡೆಸಲಿದ್ದಾರೆ. ದಕ್ಷಿಣ ಆಫ್ರಿಕಾದ ಟಿ20 ಲೀಗ್ ಎಸ್‌ಎ20 ಲೀಗ್‌ನಲ್ಲಿ ಸನ್‌ರೈಸರ್ಸ್ ಈಸ್ಟರ್ನ್‌ಕೇಪ್ ತಂಡವನ್ನು ಮುನ್ನಡೆಸಿ ಚಾಂಪಿಯನ್ ಪಟ್ಟಕ್ಕೇರಿಸಿದ್ದ ಮಾರ್ಕ್ರಮ್ ಅವರಿಗೆ ಫ್ರಾಂಚೈಸಿ ಐಪಿಎಲ್‌ನಲ್ಲಿಯೂ ಮಹತ್ವದ ಜವಾಬ್ಧಾರಿ ನೀಡಿದೆ.

ಈ ಸಂದರ್ಭದಲ್ಲಿ ಐಡೆನ್ ಮಾರ್ಕ್ರಮ್ ದಕ್ಷಿಣ ಆಫ್ರಿಕಾದ ನೂತನ ಟಿ20 ಲೀಗ್‌ SA20 ಲೀಗ್‌ನಲ್ಲಿ ಭಾರತದ ದಿಗ್ಗಜ ಆಟಗಾರ ಆಡಬೇಕು ಎಂದು ಬೇಡಿಕೆಯನ್ನಿಟ್ಟಿದ್ದಾರೆ. ಮಾರ್ಕ್ರಮ್ ಹೇಳಿದ ಆ ಆಟಗಾರ ಬೇರೆ ಯಾರೂ ಅಲ್ಲ. ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ. ಮಾಹಿ ದಕ್ಷಿಣ ಆಫ್ರಿಕಾ ಲೀಗ್‌ನಲ್ಲಿ ಆಡುವುದನ್ನು ನೋಡಲು ನಾನು ಇಷ್ಟ ಪಡುತ್ತೇನೆ ಎಂದಿದ್ದಾರೆ ಐಡೆನ್ ಮಾರ್ಕ್ರಮ್.

ದಕ್ಷಿಣ ಆಫ್ರಿಕಾದ ಅಗ್ರ ಟಿ20 ಲೀಗ್‌ನಲ್ಲಿ ಆಡಲು ಬೇಕಾದ ಎಲ್ಲಾ ಅಗತ್ಯ ಅರ್ಹತೆಗಳು ಕೂಡ ಎಂಎಸ್ ಧೋನಿ ಅವರಲ್ಲಿ ಇದೆ ಎಂದಿದ್ದಾರೆ ಮಾರ್ಕ್ರಮ್. ಧೋನಿ ಹೊಂದಿರುವ ಅನುಭವ ದಕ್ಷಿಣ ಆಫ್ರಿಕಾದ ಸ್ಥಳೀಯ ಆಟಗಾರರಿಗೆ ಅನುಕೂಲವಾಗುತ್ತದೆ ಎಂದಿದ್ದಾರೆ ಮಾರ್ಕ್ರಮ್.

"ಪ್ರಾಮಾಣಿಕವಾಗಿ ಹೇಳಬೇಕೆಂದರೆ ಎಂಎಸ್(ಧೋನಿ) ಅವರಂಥಾ ಆಟಗಾರ ನಿಮ್ ಕ್ಯಾಂಪ್‌ನಲ್ಲಿದ್ದರೆ ಯುವ ಆಟಗಾರರಿಗೆ ಕಲಿಯುವ ವಿಚಾರದಲ್ಲಿ ಬಹಳ ಶ್ರೇಷ್ಠ ಅನುಭವವಾಗುತ್ತದೆ. ಅವರ ಬಳಿ ಕ್ರಿಕೆಟ್‌ನ ಎಲ್ಲಾ ಜ್ಞಾನವಿದ್ದು ಅವರಿಂದ ನಮ್ಮ ದಕ್ಷಿಣ ಆಫ್ರಿಕಾದ ಸ್ಥಳೀಯ ಆಟಗಾರರಿಗೆ ಬಹಳ ಉಪಯೋಗವಾಗಲಿದೆ. ಇಂಥಾ ಹಲವು ಆಟಗಾರರಿದ್ದರೂ ಧೋನಿ ಹೆಸರೇ ಮೊದಲಿಗೆ ನೆನಪಿಗೆ ಬರುತ್ತಿದೆ" ಎಂದಿದ್ದಾರೆ ದಕ್ಷಿಣ ಆಫ್ರಿಕಾದ ಪ್ರತಿಭಾವಂತ ಆಟಗಾರ ಐಡೆನ್ ಮಾರ್ಕ್ರಮ್.

ಐಪಿಎಲ್‌ನಲ್ಲಿ ಮಾರ್ಕ್ರಮ್‌ಗೆ ವಿಶೇಷ ಜವಾಬ್ಧಾರಿ: ದಕ್ಷಿಣ ಆಫ್ರಿಕಾದ ಆಟಗಾರ ಐಡೆನ್ ಮಾರ್ಕ್ರಮ್ ಮುಂದಿನ ಐಪಿಎಲ್ ಆವೃತ್ತಿಗೆ ವಿಶೇಷ ಜವಾಬ್ಧಾರಿಯೊಂದಿಗೆ ಕಣಕ್ಕಿಳಿಯುತ್ತಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕತ್ವದ ಹೊಣೆಗಾರಿಗೆ ಮಾರ್ಕ್ರಮ್ ಹೆಗಲಿಗೆ ಬಿದ್ದಿದೆ. ಕಳೆದ ಎಸ್‌ಎ20 ಲೀಗ್‌ನಲ್ಲಿ ಪಡೆದ ಭರ್ಜರಿ ಯಶಸ್ಸಿಸ್ಸಿನಿಂದಾಗಿ ಫ್ರಾಂಚೈಸಿ ಮಾರ್ಕ್ರಮ್ ಮೇಲೆ ವಿಶೇಷ ನಂಬಿಕೆಯನ್ನಿಟ್ಟಿದ್ದು ಐಪಿಎಲ್‌ನಲ್ಲಿಯೂ ಅಂಥಾದ್ದೇ ಪ್ರದರ್ಶನದ ನಿರೀಕ್ಷೆಯಲ್ಲಿದೆ.

ಈ ಬಗ್ಗೆ ಮಾರ್ಕ್ರಮ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. "ಜವಾಬ್ಧಾರಿಯನ್ನು ಸ್ವಾಭಾವಿಕವಾಗಿ ನಿರ್ವಹಿಸಿದರೆ ಅದನ್ನು ಆನಂದಿಸಲು ಸಾಧ್ಯವಿದೆ. ಆಟಗಾರನಾಗಿ ನೀವು ಯಾವಾಗಲೂ ಗೆಲ್ಲುವುದನ್ನು ಬಯಸುತ್ತೀರಿ. ಆದರೆ ನೀವು ನಾಯಕನಾದಾಗ ಆ ಗೆಲುವಿನ ಹಸಿವು ಮತ್ತಷ್ಟು ಹೆಚ್ಚಾಗುತ್ತದೆ. ನಿಮ್ಮ ತಂಡ ಯಾವಾಗಲೂ ಉತ್ತಮ ಪ್ರದರ್ಶನ ನಿಡಿ ಅಭಿಮಾನಿಗಳನ್ನು ರಂಜಿಸಲು ಬಯಸುತ್ತೀರಿ. ನಿಮ್ಮ ಎಲ್ಲಾ ಪರಿಶ್ರಮವನ್ನು ಕೂಡ ನೀವು ಹಾಕುತ್ತೀರಿ. ಅದು ಕೆಲವೊಮ್ಮೆ ಕಾರ್ಯನಿರ್ವಹಿಸುತ್ತದೆ ಕೆಲವೊಮ್ಮೆ ವಿಫಲವಾಗುತ್ತದೆ. ಅದು ಆಟದ ಭಾಗ" ಎಂದಿದ್ದಾರೆ ಐಡೆನ್ ಮಾರ್ಕ್ರಮ್.

ಎಸ್‌ಎ20 ಲೀಗ್‌ನಲ್ಲಿ ಮಾರ್ಕ್ರಮ್ ನಾಯಕನಾಗಿ ಮಾತ್ವಲ್ಲ ಆಟಗಾರನಾಗಿಯೂ ಅದ್ಭುತ ಯಶಸ್ಸು ಸಾಧಿಸಿದ್ದಾರೆ. ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರ ಪೈಕಿ ಒಬ್ಬರಾಗಿದ್ದಾರೆ. ಅವರು 12 ಪಂದ್ಯಗಳಲ್ಲಿ ಒಂದು ಶತಕ ಸೇರಿದಂತೆ 366 ರನ್‌ಗಳನ್ನು ಗಳಿಸಿದ್ದು 11 ವಿಕೆಟ್ ಕೂಡ ಪಡೆದಿದ್ದಾರೆ. IPL 2022 ಸನ್‌ರೈಸರ್ಸ್ ಹೈದರಾಬಾದ್ ತಂಡ ನೀರಸ ಪ್ರದರ್ಶನದ ಬಳಿಕ ಸನ್‌ರೈಸರ್ಸ್ ಹೈದರಾಬಾದ್ ಹೊಸ ನಾಯಕನ ಮುಮದಾಳತ್ವದಲ್ಲಿ ಕಣಕ್ಕಿಲಿಯಲು ಉತ್ಸುಕವಾಗಿದೆ.