ಎಸ್‌ಎ 20 ಲೀಗ್‌ನ ಮೊದಲ ಶತಕ ಗಳಿಸಿದ ಆರ್​ಸಿಬಿ ನಾಯಕ ಫಾಫ್ ಡು ಪ್ಲೆಸಿಸ್

ಎಸ್‌ಎ 20 ಲೀಗ್‌ನ ಮೊದಲ ಶತಕ ಗಳಿಸಿದ ಆರ್​ಸಿಬಿ ನಾಯಕ ಫಾಫ್ ಡು ಪ್ಲೆಸಿಸ್

ಕ್ಷಿಣ ಆಫ್ರಿಕಾದಲ್ಲಿನ ನಡೆಯುತ್ತಿರುವ ಎಸ್‌ಎ20 ಲೀಗ್‌ನಲ್ಲಿ ಮೊದಲ ಶತಕ ಬಾರಿಸಿದ ಆಟಗಾರ ಎನ್ನುವ ಖ್ಯಾತಿಗೆ ಫಾಫ್ ಡು ಪ್ಲೆಸಿಸ್ ಭಾಜನರಾಗಿದ್ದಾರೆ. ಜೋಬರ್ಗ್‌ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿರುವ ಫಾಫ್, ಡರ್ಬನ್ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಎಸ್‌ಎ20 ಲೀಗ್‌ನ ಚೊಚ್ಚಲ ಶತಕ ಬಾರಿಸಿ ಇತಿಹಾಸ ನಿರ್ಮಿಸಿದರು.

ಮೊದಲು ಬ್ಯಾಟಿಂಗ್ ಮಾಡಿದ ಡರ್ಬನ್ ಸೂಪರ್ ಜೈಂಟ್ಸ್ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 168 ರನ್ ಕಲೆಹಾಕಿತು. ಹೆನ್ರಿಕ್ ಕ್ಲಸೀನ್ 48 ಎಸೆತಗಳಲ್ಲಿ 65 ರನ್ ಗಳಿಸುವ ಮೂಲಕ ಡರ್ಬನ್ ಸೂಪರ್ ಜೈಂಟ್ಸ್ ಸವಾಲಿನ ಮೊತ್ತ ಕಲೆಹಾಕಲು ಸಹಾಯಕವಾದರು.

ಜೋಬರ್ಗ್ ಸೂಪರ್ ಕಿಂಗ್ಸ್‌ನ ಮಹೀಶ್ ತೀಕ್ಷಣ ಮತ್ತು ಗೆರಾಲ್ಡ್ ಕೊಯಿಟ್ಜೀ ತಲಾ 3 ವಿಕೆಟ್ ಪಡೆಯುವ ಮೂಲಕ ಡರ್ಬನ್ ಸೂಪರ್ ಜೈಂಟ್ಸ್ ರನ್ ಗಳಿಕೆಗೆ ಕಡಿವಾಣ ಹಾಕಿದರು.

169 ರನ್‌ಗಳ ಗುರಿಯನ್ನು ಬೆನ್ನತ್ತಿದ ಜೋ ಬರ್ಗ್ ಸೂಪರ್ ಕಿಂಗ್ಸ್‌ ತಂಡಕ್ಕೆ ನಾಯಕ ಫಾಫ್ ಡು ಪ್ಲೆಸಿಸ್ ಆಸರೆಯಾದರು. ರೀಝಾ ಹೆಂಡ್ರಿಕ್ಸ್ ಮತ್ತು ಫಾಫ್ ಡು ಪ್ಲೆಸಿಸ್ ಮೊದಲನೇ ವಿಕೆಟ್‌ಗೆ 157 ರನ್‌ಗಳನ್ನು ಕಲೆಹಾಕುವ ಮೂಲಕ ಗೆಲುವು ಖಚಿತಪಡಿಸಿದರು. 157 ರನ್‌ಗಳ ಜೊತೆಯಾಟದಲ್ಲಿ ರೀಝಾ ಹೆಂಡ್ರಿಕ್ಸ್ 46 ಎಸೆತಗಳಲ್ಲಿ 45 ರನ್ ಗಳಿಸಿದರೆ, ಡುಪ್ಲೆಸಿಸ್ 53 ಎಸೆತಗಳಲ್ಲಿ 99 ರನ್ ಗಳಿಸಿದ್ದರು.

ಎಸ್‌ಎ 20 ಲೀಗ್‌ನ ಮೊದಲ ಶತಕ

ನಂತರ ಎಸ್‌ಎ 20 ಲೀಗ್‌ನ ಮೊದಲ ಶತಕವನ್ನು ದಾಖಲಿಸಿ ಸಂಭ್ರಮಿಸಿದ ಅವರು, ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು. 19.1 ಓವರ್ ಗಳಲ್ಲಿ ಜೋಬರ್ಗ್ ಸೂಪರ್ ಕಿಂಗ್ಸ್ 2 ವಿಕೆಟ್ ಕಳೆದುಕೊಂಡು ಗುರಿ ಮುಟ್ಟುವ ಮೂಲಕ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.

ಫಾಫ್‌ ಡು ಪ್ಲೆಸಿಸ್ 58 ಎಸೆತಗಳಲ್ಲಿ ಅಜೇಯ 113 ರನ್ ಗಳಿಸಿದರು. ಅವರ ಈ ಅಮೋಘ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಮತ್ತು 8 ಸಿಕ್ಸರ್ ಗಳು ಸೇರಿದ್ದವು. ಈ ಗೆಲುವಿನ ಮೂಲಕ ಜೋ ಬರ್ಗ್ ಸೂಪರ್ ಕಿಂಗ್ಸ್ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ.

ಆರ್ ಸಿಬಿ ನಾಯಕನ ಆಟಕ್ಕೆ ಮೆಚ್ಚುಗೆ

ಐಪಿಎಲ್‌ 2023ರ ಆರಂಭಕ್ಕೆ ಮುನ್ನ ಆರ್ ಸಿಬಿ ಆಟಗಾರರು ಅತ್ಯುತ್ತಮ ಫಾರ್ಮ್ ಪ್ರದರ್ಶಿಸುತ್ತಿರುವುದು ಅಭಿಮಾನಿಗಳಿಗೆ ಖುಷಿ ತಂದಿದೆ. ಫಾಫ್‌ ಡು ಪ್ಲೆಸಿಸ್ 2022ರಲ್ಲಿ ಆರ್ ಸಿಬಿ ನಾಯಕತ್ವ ವಹಿಸಿಕೊಂಡಿದ್ದರು, ತಂಡವನ್ನು ಪ್ಲೇ ಆಫ್‌ ಹಂತದವರೆಗೆ ಯಶಸ್ವಿಯಾಗಿ ಮುನ್ನಡೆಸಿದ್ದರು.