ಪ್ರೀತಿ ಗೆಹ್ಲೋತ್ ಸೇರಿ 3 ಐಎಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು ಜನವರಿ 25 : ಕರ್ನಾಟಕ ಸರ್ಕಾರ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಇರುವಾಗ ಆಡಳಿತ ಯಂತ್ರದಲ್ಲಿ ಹಲವು ಬದಲಾವಣೆ ಮಾಡುತ್ತಿದೆ. ಮೂವರು
ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಮಂಗಳವಾರ ಮೂವರು ಐಎಎಸ್ ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆಗೊಳಿಸಿದೆ. ತಕ್ಷಣದಿಂದಲೇ ಈ ಆದೇಶ ಜಾರಿಗೆ ಬರಲಿದೆ ಎಂದು ಜನವರಿ 24ರ ಸಂಜೆ ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.2016ನೇ ಬ್ಯಾಚ್ ಕರ್ನಾಟಕ ಕೆಡರ್‌ನ ಐಎಎಸ್ ಅಧಿಕಾರಿ ಪ್ರೀತಿ ಗೆಹ್ಲೋಟ್ ವರ್ಗಾವಣೆ ಮಾಡಲಾಗಿದೆ. ಕರ್ನಾಟಕ ಪುರಸಭೆ ದತ್ತಾಂಶ ಸೊಸೈಟಿ (ಕೆಎಂಡಿಎಸ್) ಜಂಟಿ ಆಯುಕ್ತರಾಗಿದ್ದ ಪ್ರೀತಿ ಗೆಹ್ಲೋಟ್‌ರನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (Estates) ವಿಶೇಷ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದೆ.ಡಾ. ರವಿಶಂಕರ್ ಜೆ. (ಕೆಎನ್ 2001) ವಸತಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಯನ್ನು ಮುಂದಿನ ಆದೇಶದ ತನಕ ಅಬಕಾರಿ ಇಲಾಖೆ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದೆ.
ಡಾ. ರಾಮ್ ಪ್ರಸಾತ್ ಮನೋಹರ್ ವಿ. (ಕೆಎನ್ 2016) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (Estates) ವಿಶೇಷ ಆಯುಕ್ತರನ್ನು ಮುಂದಿನ ಆದೇಶದ ತನಕ ಪ್ರವಾಸೋದ್ಯಮ ಇಲಾಖೆ ಆಯುಕ್ತರಾಗಿ ನೇಮಿಸಲಾಗಿದೆ.
ವಿಧಾನಸಭೆ ಚುನಾವಣೆ ಸಿದ್ಧತೆ ಕರ್ನಾಟಕದಲ್ಲಿ 2023ರ ಏಪ್ರಿಲ್ ಅಥವ ಮೇ ತಿಂಗಳಿನಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಚುನಾವಣಾ ಆಯೋಗ ಚುನಾವಣಾ ಸಿದ್ಧತೆಗಳನ್ನು ಆರಂಭಿಸಿದ್ದು, ಅಧಿಕಾರಿಗಳಿಗೆ ತರಬೇತಿಯನ್ನು ಸಹ ಆರಂಭಿಸಿದೆ.
ಕೇಂದ್ರ ಚುನಾವಣಾ ಆಯೋಗ ಚುನಾವಣಾ ಕಾರ್ಯದಲ್ಲಿರುವ ಅಧಿಕಾರಿಗಳ ವರ್ಗಾವಣೆ ಮಾಡದಂತೆ ಈಗಾಗಲೇ ಕರ್ನಾಟಕ ಸರ್ಕಾರಕ್ಕೆ ಪತ್ರವನ್ನು ಬರೆದಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಚೇರಿಯಿಂದ ವಿವಿಧ ಇಲಾಖೆಗಳಿಗೆ ಸೋಮವಾರ ಟಿಪ್ಪಣಿಯೊಂದನ್ನು ನೀಡಲಾಗಿದೆ. ವರ್ಗಾವಣೆ ಅವಧಿ ಮುಕ್ತಾಯಗೊಂಡಿರುವುದರಿಂದ ಹಾಗೂ ಮುಂದೆ ಆಯವ್ಯಯ ಅಧಿವೇಶನ ಹಾಗೂ ವಿಧಾನಸಭೆ ಸಾರ್ವತ್ರಿಕ ಚುನಾವಣೆಗಳು ಇರುವುದರಿಂದ, ಈ ಹಂತದಲ್ಲಿ ಯಾವುದೇ ವರ್ಗಾವಣೆ/ ನಿಯೋಜನೆ ಪ್ರಸ್ತಾವನೆಗಳನ್ನು ಸಲ್ಲಿಸದೇ ಇರಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.