ಚಿತ್ರಾಪುರ ಬೀಚ್ ನಲ್ಲಿ ತಲ್ವಾರ್ ದಾಳಿ: ಹಲವರ ಮೇಲೆ ಹಲ್ಲೆ
ಸುರತ್ಕಲ್: ಪಣಂಬೂರು ಮೊಗವೀರ ಮಹಾಸಭಾ ವ್ಯಾಪ್ತಿಗೆ ಒಳಪಟ್ಟ ಚಿತ್ರಾಪುರ ಕಡಲಕಿನಾರೆಯ ಬಳಿ ನಿನ್ನೇ ಸಂಜೆ ಗಾಂಜಾದ ಅಮಲಿನಲ್ಲಿದ್ದ ಯುವಕರ ತಂಡವೊಂದು ಸಾರ್ವಜನಿಕರೆದುರೇ ತಲವಾರು ಝಳಪಿಸುತ್ತಾ ರಿಕ್ಷಾ ಚಾಲಕನಿಗೆ ಹಾಗೂ ಕೆಲವು ಜನರ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಕಳೆದ ತಿಂಗಳುಗಳಿಂದ ಕಡಲ ಕಿನಾರೆಯ ಬಳಿ ಕಡಲ್ಕೊರೆತ ಆಗದಂತೆ ತಂದಿದ್ದ ಕಲ್ಲುಗಳ ಮಧ್ಯೆ ಭಾಗದಲ್ಲಿ ಕೆಲವು ಯುವಕರು ಗಾಂಜಾ ಸೇವನೆ, ಮಾರಾಟ ಹಾಗೂ ಅನೈತಿಕ ಚಟುವಟಿಕೆಗಳನ್ನು ನಡೆಸುತ್ತಿದ್ದು ಇದರ ವಿರುದ್ಧ ಪಣಂಬೂರು ಮೊಗವೀರ ಮಹಾಸಭಾದ ಪ್ರಮುಖರು ಅಲ್ಲದೇ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದರು.
ಈ ಘಟನೆಯಿಂದ ಕೋಪೋದ್ರಿಕ್ತರಾದ ಯುವಕರು ನಿಮ್ಮನ್ನೆಲ್ಲಾ ಸುಮ್ಮನೆ ಬಿಡುವುದಿಲ್ಲವೆಂದು ಬೆದರಿಸುತ್ತಾ ಗಾಂಜಾದ
ಅಮಲಿನಲ್ಲಿ ಆದಿತ್ಯವಾರ ಸಂಜೆ ಚಿತ್ರಾಪುರ ಕಡಲಕಿನಾರೆಯ ಬಳಿ ಸಾರ್ವಜನಿಕರೆದುರೇ ತಲವಾರು ಝಳಪಿಸುತ್ತಾ ಆ ಭಾಗದಲ್ಲಿದ್ದ ರಿಕ್ಷಾ ಚಾಲಕ ಸುನಿಲ್ ಎಂಬುವವರ ಮೇಲೆ ಹಾಗೂ ಕೆಲವು ಜನಗಳ ಮೇಲೂ ಹಲ್ಲೆ ನಡೆಸಲು ಯತ್ನಿಸಿದ್ದಾರೆ. ಗಾಯಗೊಂಡ ರಿಕ್ಷಾಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಗಾಂಜಾದ ಅಮಲಿನಲ್ಲಿ ಹಲ್ಲೆ ನಡೆಸಿದ ಅಮನ್ ಎಂಬುವವನ್ನು ಸಾರ್ವಜನಿಕರು ಹಿಡಿದು ಪೋಲಿಸರಿಗೊಪ್ಪಿಸಿದ್ದು ಮತ್ತೋರ್ವ ಯುವಕ ಪರಾರಿಯಾಗಿದ್ದಾನೆ. ಈ ಬಗ್ಗೆ ಸುರತ್ಕಲ್ ಪೋಲಿಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.