ಹೊಸ ವರ್ಷಕ್ಕೆ ನೂತನ ಮಾರ್ಗಸೂಚಿ -ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: 'ವಿದೇಶಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಮುಂಜಾಗ್ರತಾ ಕ್ರಮವಾಗಿ ಹೊಸ ವರ್ಷಾಚರಣೆಗೆ ನೂತನ ಮಾರ್ಗಸೂಚಿಗಳನ್ನು ಹೊರಡಿಸಲಾಗುವುದು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಕಂದಾಯ ಸಚಿವ ಆರ್.ಅಶೋಕ ಮತ್ತು ಆರೋಗ್ಯ ಸಚಿವ ಡಾ.ಸುಧಾಕರ್ ಅವರು ಭಾನುವಾರ ಸಭೆ ನಡೆಸಿ, ಮಾರ್ಗಸೂಚಿಗಳನ್ನು ಪ್ರಕಟಿಸಲಿದ್ದಾರೆ' ಎಂದರು.
ಬೂಸ್ಟರ್ ಡೋಸ್ ನೀಡಲು ತಾಲ್ಲೂಕು ಮತ್ತು ಜಿಲ್ಲಾಮಟ್ಟದಲ್ಲಿ ಶಿಬಿರ ಏರ್ಪಡಿಸಬೇಕು. ಆರೋಗ್ಯ ಪರಿಕರಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಂಡು, ಔಷಧ ಹಾಗೂ ಲಸಿಕೆ ಕೊರತೆ ಆಗದಂತೆ ನೋಡಿಕೊಳ್ಳಬೇಕು ಎಂದು ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ. ಆಸ್ಪತ್ರೆಗಳಲ್ಲಿರುವ ಆಮ್ಲಜನಕ ಘಟಕಗಳು ತುರ್ತು ಸಂದರ್ಭದಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ, ಅವುಗಳನ್ನು ಪ್ರಾಯೋಗಿಕವಾಗಿ ಚಾಲನೆಯಲ್ಲಿಡಲು ತಿಳಿಸಲಾಗಿದೆ' ಎಂದು ಹೇಳಿದರು.
ಕಾಂಗ್ರೆಸ್‌ನಲ್ಲಿ ಒಳಜಗಳ: 'ಅವಧಿಪೂರ್ವ ಚುನಾವಣೆ ನಡೆಸುವ ಯೋಚನೆಯೂ ನಮ್ಮಲ್ಲಿಲ್ಲ. ಪಕ್ಷದ ಯೋಜನೆಗಳನ್ನು ಜನರಿಗೆ ತಲುಪಿಸಲು ಯತ್ನಿಸುತ್ತಿದ್ದೇವೆ. ಚುನಾವಣೆಗೆ ಇನ್ನೂ ಸಮಯ ಇರುವುದರಿಂದ ಕಾಂಗ್ರೆಸ್ ನಾಯಕರಲ್ಲಿ ಒಳಜಗಳಗಳು ಹೆಚ್ಚಾಗುತ್ತಿವೆ. ಅದಕ್ಕಾಗಿ ಕಾರ್ಯಕರ್ತರಿಗೆ ಅವಧಿಪೂರ್ವ ಚುನಾವಣೆ ನಡೆಯುತ್ತದೆ ಎಂದು ಸಂದೇಶ ನೀಡುತ್ತಿದ್ದಾರೆ' ಎಂದು ಪ್ರಶ್ನೆಯೊಂದಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಪ್ರತಿಕ್ರಿಯಿಸಿದರು.