ಕೇಂದ್ರ, ರಾಜ್ಯದಿಂದ ದೀಪಾವಳಿ ಗಿಫ್ಟ್; 75000 ನೇಮಕ ಆದೇಶ, ಅಭ್ಯರ್ಥಿಗಳ ಜತೆ ಪಿಎಂ ಸಂವಾದ

ನವದೆಹಲಿ: ಕೇಂದ್ರ ಸರ್ಕಾರವು 10 ಲಕ್ಷ ಜನರಿಗೆ ಸಮರೋಪಾದಿಯಲ್ಲಿ ಉದ್ಯೋಗಾವಕಾಶ ಕಲ್ಪಿಸಲು ಮುಂದಡಿ ಇಟ್ಟಿದ್ದು, ಇದರ ಅಂಗವಾಗಿ ಶನಿವಾರ 75 ಸಾವಿರ ಜನರಿಗೆ ನೇಮಕಾತಿ ಆದೇಶಗಳನ್ನು ಹಸ್ತಾಂತರಿಸಲಿದೆ. ಇದಕ್ಕಾಗಿ ದೇಶದ ವಿವಿಧೆಡೆ ಉದ್ಯೋಗ ಮೇಳಗಳನ್ನು ಆಯೋಜಿಸಿದೆ.
ನೇಮಕಾತಿ ಪ್ರಕ್ರಿಯೆಯನ್ನು ವೇಗವಾಗಿ ನಡೆಸಲು ಅನುಕೂಲವಾಗುವಂತೆ ಆಯ್ಕೆಯ ತಂತ್ರಜ್ಞಾನವನ್ನು ಸರಳಗೊಳಿಸಲಾಗಿದೆ. ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಮುಂದಿನ ಒಂದೂವರೆ ವರ್ಷದಲ್ಲಿ 10 ಲಕ್ಷ ಉದ್ಯೋಗ ಸೃಜಿಸಲಾಗುವುದು ಎಂದು ಪ್ರಧಾನಿ ಮೋದಿ ಕಳೆದ ಜೂನ್ನಲ್ಲಿ ಘೋಷಿಸಿದ್ದರು.
ಎಲ್ಲೆಲ್ಲಿ ಉದ್ಯೋಗ?: ರಕ್ಷಣಾ ಇಲಾಖೆ, ರೈಲ್ವೆ, ಅಂಚೆ ಕಚೇರಿ, ಗೃಹ ಸಚಿವಾಲಯ, ಕಾರ್ವಿುಕ ಇಲಾಖೆ, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ, ಸಿಬಿಐ, ಕಸ್ಟಮ್್ಸ ಇಲಾಖೆ, ಬ್ಯಾಂಕ್, ಅರೆ ಸೇನಾಪಡೆ, ಸೇನಾಪಡೆ, ಯುಪಿಎಸ್ಸಿ, ಎಸ್ಎಸ್ಸಿ ಆದಾಯ ತೆರಿಗೆ ಇಲಾಖೆ ಸೇರಿ 38 ಇಲಾಖೆಗಳಲ್ಲಿ ಪತ್ರಾಂಕಿತ ಮತ್ತು ಪತ್ರಾಂಕಿತೇತರ ಹುದ್ದೆಗಳು ಇವಾಗಿವೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಈ ಸಚಿವಾಲಯ ಮತ್ತು ಇಲಾಖೆಗಳು ನೇಮಕಾತಿ ಪತ್ರ ನೀಡಲಿವೆ.
ಕೇಂದ್ರ ಸಚಿವರಿಂದ ವಿತರಣೆ: ದೇಶದ ವಿವಿಧೆಡೆ ಶನಿವಾರ ನೇಮಕಾತಿ ಪತ್ರ ವಿತರಣೆ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಕೇಂದ್ರ ಸಚಿವರು ಭಾಗಿಯಾಗಲಿದ್ದಾರೆ. ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ್ ಒಡಿಶಾದಲ್ಲಿ, ಆರೋಗ್ಯ ಸಚಿವ ಮನಸುಖ್ ಮಾಂಡವಿಯ- ಗುಜರಾತ್, ವಾರ್ತಾ ಸಚಿವ ಅನುರಾಗ್ ಠಾಕೂರ್- ಚಂಡೀಗಢ, ವಾಣಿಜ್ಯ ಸಚಿವ ಪಿಯೂಷ್ ಗೋಯಲ್- ಮಹಾರಾಷ್ಟ್ರ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್- ರಾಜಸ್ಥಾನ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್- ತಮಿಳುನಾಡು, ಬೃಹತ್ ಕೈಗಾರಿಕೆ ಸಚಿವ ಮಹೇಂದ್ರ ಪಾಂಡೆ- ಉತ್ತರಪ್ರದೇಶ, ಬುಡಕಟ್ಟು ಜನರ ಕಲ್ಯಾಣ ಸಚಿವ ಅರ್ಜುನ್ ಮುಂಡಾ- ಜಾರ್ಖಂಡ್ ಹಾಗೂ ಪಂಚಾಯತ್ ರಾಜ್ ಸಚಿವ ಗಿರಿರಾಜ್ ಸಿಂಗ್ ಬಿಹಾರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಉದ್ಯೋಗಾವಕಾಶ ಸೃಷ್ಟಿಗೆ ಆದ್ಯತೆ: ಚುನಾವಣೆ ವೇಳೆ ಬಿಜೆಪಿ ಪ್ರಣಾಳಿಕೆಯಲ್ಲಿ ನೀಡಿದ್ದ ಉದ್ಯೋಗ ಭರವಸೆಯಂತೆ ಹಂತ ಹಂತವಾಗಿ ಉದ್ಯೋಗ ಸೃಜನೆ ಕಾರ್ಯವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಪ್ರಧಾನಿ ಮೋದಿ ಸೂಚನೆಯಂತೆ ವಿವಿಧ ಸಚಿವಾಲಯ ಮತ್ತು ಇಲಾಖೆಗಳು ಖಾಲಿ ಇರುವ ಹುದ್ದೆಗಳ ಭರ್ತಿಗೆ ತ್ವರಿತವಾಗಿ ಕ್ರಮ ವಹಿಸುತ್ತಿವೆ.
ಯಾವ ಹುದ್ದೆಗಳು?: ಕೇಂದ್ರೀಯ ಸಶಸ್ತ್ರ ಪಡೆಯಲ್ಲಿ ಸಬ್ ಇನ್ಸ್ಪೆಕ್ಟರ್, ಕಾನ್ಸ್ಟೆಬಲ್, ಕಿರಿಯ ಗುಮಾಸ್ತ, ಸ್ಟೆನೋಗ್ರಾಫರ್, ಆಪ್ತ ಸಹಾಯಕ, ಆದಾಯ ತೆರಿಗೆ ಇಲಾಖೆ ಇನ್ಸ್ಪೆಕ್ಟರ್, ಎಂಟಿಎಸ್ ಮೊದಲಾದ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ.