ಫಿಫಾ ವಿಶ್ವಕಪ್: ಹಾಲಿ ಚಾಂಪಿಯನ್ ಫ್ರಾನ್ಸ್ ಫೈನಲ್ ಗೆ ಲಗ್ಗೆ: ಮೊರಾಕ್ಕೊಗೆ 0-2ರಿಂದ ಆಘಾತ
ಹಾಲಿ ಚಾಂಪಿಯನ್ ಫ್ರಾನ್ಸ್ ತಂಡ 2-0 ಗೋಲುಗಳಿಂದ ಮೊರಾಕ್ಕೊ ತಂಡದ ವಿರುದ್ಧ ಜಯಭೇರಿ ಬಾರಿಸುವ ಮೂಲಕ ಸತತ ಎರಡನೇ ಬಾರಿ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದೆ.
ಅಲ್ ಬೈಯತ್ ಮೈದಾನದಲ್ಲಿ ಬುಧವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಫ್ರಾನ್ಸ್ ಪರ ಥಿಯೊ ಹೆರ್ನಾಂಡೀಸ್ (5ನೇ ನಿಮಿಷ) ಮತ್ತು ಬದಲಿ ಆಟಗಾರ ರಂಡಲ್ ಕೊಲೊ ಮೌನಿ (79ನೇ ನಿಮಿಷ) ತಲಾ ಒಂದು ಗೋಲು ಸಿಡಿಸಿದರು.
ಪಂದ್ಯದ ಆರಂಭದಲ್ಲೇ ಫ್ರಾನ್ಸ್ ಗೋಲು ಬಾರಿಸಿ ಕೊನೆಯವರೆಗೂ ಮುನ್ನಡೆ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾದರೂ ಮೊರಾಕ್ಕೊ ಆಟಗಾರರು ಎರಡನೇ ಅವಧಿಯಲ್ಲಿ ಸತತ ದಾಳಿ ನಡೆಸಿ ಫ್ರಾನ್ಸ್ ತಂಡವನ್ನು ಕೊನೆಯವರೂ ಒತ್ತಡದಲ್ಲಿ ಇರುವಂತೆ ಮಾಡಿತು.
ಪಂದ್ಯದ ಕೊನೆಯ ಹಂತದಲ್ಲಿ ಬದಲಿ ಆಟಗಾರನಾಗಿ ಕಣಕ್ಕಿಳಿದ ರಂಡಲ್ ಕೊಲೊ ಮೌನಿ 2ನೇ ಗೋಲು ಬಾರಿಸಿ ತಂಡದ ಗೆಲುವನ್ನು ಖಚಿತಪಡಿಸಿದರು. ಫ್ರಾನ್ಸ್ ಫೈನಲ್ ನಲ್ಲಿ ಲಿಯೊನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡವನ್ನು ಎದುರಿಸಲಿದೆ.