ಸರ್ವೋದಯದಲ್ಲಿ ಒಗ್ಗಟ್ಟು; ಭಿನ್ನಾಭಿಪ್ರಾಯ ಮರೆಯುವಂತೆ ನಾಯಕರಿಗೆ ಖರ್ಗೆ ಸಲಹೆ

ಸರ್ವೋದಯದಲ್ಲಿ ಒಗ್ಗಟ್ಟು; ಭಿನ್ನಾಭಿಪ್ರಾಯ ಮರೆಯುವಂತೆ ನಾಯಕರಿಗೆ ಖರ್ಗೆ ಸಲಹೆ

ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹುಟ್ಟುಹಬ್ಬ, ಮೇಕೆದಾಟು ಪಾದಯಾತ್ರೆ ಹಾಗೂ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರ ಭಾರತ್‌ ಜೋಡೋ ಯಾತ್ರೆ ಮೂಲಕ ಈಗಾಗಲೇ ತನ್ನ ಶಕ್ತಿ ಪ್ರದರ್ಶನ ಮಾಡಿದ್ದ ಕಾಂಗ್ರೆಸ್‌, ರವಿವಾರ ಅರಮನೆ ಮೈದಾನದಲ್ಲಿ ಸರ್ವೋದಯ ಸಮಾವೇಶದ ಮೂಲಕ ಒಗ್ಗಟ್ಟು ಪ್ರದರ್ಶಿಸಿ ಚುನಾವಣೆಗೆ ರಣಕಹಳೆ ಮೊಳಗಿಸಿತು.

ಅಖಿಲ ಭಾರತ ಕಾಂಗ್ರೆಸ್‌ ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಮ್ಮಾನಿಸುವ ನೆಪದಲ್ಲಿ ಕಾಂಗ್ರೆಸ್‌ ಮುಖಂಡರು ಒಂದೇ ವೇದಿಕೆಯಲ್ಲಿ ಒಗ್ಗಟ್ಟು ಪ್ರದರ್ಶಿಸಿ ದರು. ಜತೆಗೆ ಮುಂಬರುವ ಚುನಾ ವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡಿದರು.

ಭಿನ್ನಾಭಿಪ್ರಾಯವನ್ನು ಮರೆತು ಒಟ್ಟಾಗಿ ಕೆಲಸ ಮಾಡಬೇಕು ಎಂದು ಮುಖಂಡರಿಗೆ ಕಿವಿಮಾತು ಹೇಳಿದ ಖರ್ಗೆ, ಮುಂದಿನ ಚುನಾವಣೆಯಲ್ಲಿ ಒಟ್ಟಾಗಿ ದುಡಿದು ಪಕ್ಷವನ್ನು ಅಧಿಕಾರಕ್ಕೆ ತಂದರೆ ಅದೇ ನನಗೆ ನೀಡುವ ದೊಡ್ಡ ಸಮ್ಮಾನ ಎಂದರು.

ಭಿನ್ನಾಭಿಪ್ರಾಯ ಮರೆತು ಅಧಿಕಾರಕ್ಕೆ ತನ್ನಿ
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಸಣ್ಣಸಣ್ಣ ಭಿನ್ನಾಭಿ ಪ್ರಾಯಗಳನ್ನು ಮರೆತು ಒಗ್ಗಟ್ಟಿನಿಂದ ಇರಿ. ಕೆಲವರು ನನಗೆ ಅಧಿಕಾರ ಸಿಗಲಿಲ್ಲ, ಮಂತ್ರಿ ಮಾಡಲಿಲ್ಲ, ಅಧ್ಯಕ್ಷರನ್ನಾಗಿ ಮಾಡಲಿಲ್ಲ. ನನ್ನ ಮಾತು ಕೇಳ್ಳೋದಿಲ್ಲ ಎಂಬ ನೋವುಗಳೆಲ್ಲವನ್ನು ಬದಿಗಿಟ್ಟು ತತ್ತ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟು ಕೆಲಸ ಮಾಡಿ 2023ರಲ್ಲಿ ಕಾಂಗ್ರೆಸ್‌ ಅನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಬೇಕು ಎಂದು ಸೂಚನೆ ನೀಡಿದರು.
ಸಿದ್ಧಾಂತ ಇಟ್ಟುಕೊಂಡು ಕೆಲಸ ಮಾಡು ವವರು ಪಕ್ಷವನ್ನು ತೊರೆಯುವುದಿಲ್ಲ. ಪಕ್ಷ ದಲ್ಲಿ ತೂತುಗಳಿದ್ದು, ಅವುಗಳನ್ನು ಮುಚ್ಚುವ ಕೆಲಸ ಆಗಬೇಕಿದೆ. ಮುಂದಿನ ದಿನಗಳಲ್ಲಿ ರಣದೀಪ್‌ ಸಿಂಗ್‌ ಸುಜೇìವಾಲ ಆ ಕೆಲಸ ಮಾಡ ಲಿದ್ದಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಸಹಿತ ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆ ಎದು ರಿಸಲಿದ್ದಾರೆ. ಇವತ್ತು ನೀವು ಗೌರವ ನೀಡು ವುದಕ್ಕಿಂತ, ಭ್ರಷ್ಟ ಬಿಜೆಪಿಯನ್ನು ಮುಂದಿನ ಚುನಾವಣೆಯಲ್ಲಿ ಸೋಲಿಸಿ ಪಕ್ಷವನ್ನು ಅಧಿಕಾರಕ್ಕೆ ತನ್ನಿ. ಆಗ ನನಗೆ ಶಾಲು ಹೊದಿಸಿ ಸಮ್ಮಾನಿಸಿದರೆ ಸಂತೋಷ ಪಡುತ್ತೇನೆ ಎಂದು ಹೇಳಿದರು.

ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್‌, ಮಾಜಿ ಕೇಂದ್ರ ಸಚಿವ ಕೆ.ಎಚ್‌.ಮುನಿಯಪ್ಪ, ರೆಹಮಾನ್‌ ಖಾನ್‌, ಆರ್‌.ವಿ.ದೇಶಪಾಂಡೆ, ಡಾ| ಜಿ.ಪರಮೇಶ್ವರ್‌, ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಲಿ, ಎಚ್‌.ಕೆ.ಪಾಟೀಲ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ, ಈಶ್ವರ್‌ ಖಂಡ್ರೆ, ಶ್ಯಾಮನೂರು ಶಿವಶಂಕರಪ್ಪ , ಕಾಗೋಡು ತಿಮ್ಮಪ್ಪ, ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸುಜೇìವಾಲ ಮುಂತಾದ ಘಟಾನುಘಟಿಗಳು ವೇದಿಕೆಯಲ್ಲಿದ್ದರು.

ಭಾವುಕರಾದ ಖರ್ಗೆ
ಸಮ್ಮಾನ ಸ್ವೀಕರಿಸಿ ಮಾತನಾಡುವಾಗ ಮಲ್ಲಿಕಾರ್ಜುನ ಖರ್ಗೆ ಭಾವುಕರಾದರು. ಸಣ್ಣ ಸಣ್ಣ ವಿಚಾರಗಳಿಗೂ ಮುನಿಸಿ ಪಕ್ಷ ತೊರೆಯುವುದನ್ನು ಬಿಡಿ. ನಮ್ಮೊಳಗಿನ ಸಣ್ಣತನಕ್ಕೆ ಪಕ್ಷವನ್ನು ಬಲಿ ಕೊಡಬೇಡಿ. ನಾನು ಕೂಡ ನೋವು ನುಂಗಿಕೊಂಡು ಬಂದಿದ್ದೇನೆ. ಆದರೆ ಎಂದಿಗೂ ಪಕ್ಷಕ್ಕೆ ದ್ರೋಹ ಬಗೆಯುವ ಕೆಲಸ ಮಾಡಲಿಲ್ಲ. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷತೆಯಿಂದ ರಾಷ್ಟ್ರೀಯ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದ ವರೆಗೆ ತಲುಪಿದ್ದೇನೆ. ಕಾಂಗ್ರೆಸ್‌ನಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲ ಎನ್ನುವವರಿಗೆ ಈಗ ಉತ್ತರ ದೊರೆತಿದೆ ಎಂದರು.

ಭಾಷಣದಲ್ಲಿ ಖರ್ಗೆ ಹೇಳಿದ್ದು
-1969ರಲ್ಲಿ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷನಾಗಿ ಬಳಿಕ ಒಂದೊಂದೇ ಹುದ್ದೆ ಏರುತ್ತಾ ಇಲ್ಲಿಗೆ ತಲುಪಿದ್ದೇನೆ.
– ಸೋನಿಯಾ ಗಾಂಧಿಯವರು ಸಿಡಬ್ಲ್ಯೂಸಿ ಅಧ್ಯಕ್ಷ ಸ್ಥಾನ ನೀಡಿದರು. ಈಗ ಪಕ್ಷ ಅಧ್ಯಕ್ಷ ಸ್ಥಾನದ ಹುದ್ದೆ ನೀಡಿದೆ.
– ಕೆಲವರು ಸಂಘಟನೆಯ ಯಾವ ಹಂತದಲ್ಲೂ ಕೆಲಸ ಮಾಡದೆ ನೇರವಾಗಿ ದೊಡ್ಡ ಸ್ಥಾನ ಬೇಕು ಎನ್ನುತ್ತಾರೆ.
-ಮೊದಲು ಸೇವೆ ಮಾಡಬೇಕು. ಬದ್ಧತೆ ಇರಿಸಿಕೊಂಡು ಕೆಲಸ ಮಾಡಿದರೆ ನಮ್ಮ ಗುರಿ ತಲುಪುತ್ತೇವೆ.

ಭಿನ್ನಾಭಿಪ್ರಾಯ ಮರೆಯೋಣ
ಸಿದ್ದರಾಮಯ್ಯ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ನಾಡು ಕಂಡ ಶ್ರೇಷ್ಠ ಮತ್ತು ಸ್ವಾಭಿಮಾನದ ರಾಜಕಾರಣಿ. ದಲಿತರು, ದಮನಿತರು ಹಾಗೂ ಕೂಲಿ ಕಾರ್ಮಿಕರ ಧ್ವನಿಯಾಗಿ ಕೆಲಸ ಮಾಡಿದ್ದಾರೆ. ನಮ್ಮ ಪಕ್ಷದಲ್ಲಿ ಇರಬಹುದಾದ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳ ಬಗ್ಗೆ ಖರ್ಗೆ ಎಚ್ಚರಿಕೆಯ ಮಾತುಗಳನ್ನಾಡಿದ್ದಾರೆ. ನಮ್ಮ ನಾಯಕರಿಂದ ಹಿಡಿದು, ಕಾರ್ಯಕರ್ತರವರೆಗೆ ಎಲ್ಲರೂ ಅರ್ಥ ಮಾಡಿಕೊಳ್ಳುತ್ತಾರೆ ಎಂದು ಹೇಳಲು ಬಯಸುತ್ತೇನೆ ಎಂದು ಹೇಳಿದರು.

ಪಕ್ಷ ನಿಷ್ಠೆಗೆ ಒಲಿದ ಗೌರವ
ಕೆಪಿಪಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮಾತನಾಡಿ, ಖರ್ಗೆ ಎಂದೂ ಅಧಿಕಾರದ ಹಿಂದೆ ಹೋದವರೇ ಅಲ್ಲ. ಇಂದು ಗಾಂಧೀಜಿ, ನೆಹರೂ, ಸುಭಾಷ್‌ ಚಂದ್ರ ಬೋಸ್‌, ಇಂದಿರಾ ಗಾಂಧಿ ಅವರಿದ್ದ ಜಾಗದಲ್ಲಿ ಖರ್ಗೆ ಇದ್ದಾರೆ. ಕೇಂದ್ರ ಸಚಿವರಾಗಿ ಅವರು ನೀಡಿದ ಕೊಡುಗೆ ಶ್ಲಾಘನೀಯ. ಕಲ್ಯಾಣ ಕರ್ನಾಟಕಕ್ಕೆ ನೀಡಿದ ಕೊಡುಗೆಯನ್ನು ಎಂದಿಗೂ ಮರೆಯಲಾಗದು. ಹಾಗೆಯೇ, ಪಕ್ಷಕ್ಕಾಗಿ ಹಲವು ರೀತಿಯ ತ್ಯಾಗಗಳನ್ನು ಮಾಡಿದ್ದಾರೆ. ಅವರ ಪಕ್ಷ ನಿಷ್ಠೆಗೆ ದೊಡ್ಡ ಹುದ್ದೆ ಒಲಿದಿದೆ ಎಂದರು.