ಸಿದ್ದರಾಮಯ್ಯ ಎಲ್ಲಿಂದ ಸ್ಪರ್ಧೆ: ಗೊಂದಲದ ಹಿಂದೆ ಇದೆಯಾ ವ್ಯವಸ್ಥಿತ ಗೇಂ ಪ್ಲ್ಯಾನ್?

ಸಿದ್ದರಾಮಯ್ಯ ಎಲ್ಲಿಂದ ಸ್ಪರ್ಧೆ: ಗೊಂದಲದ ಹಿಂದೆ ಇದೆಯಾ ವ್ಯವಸ್ಥಿತ ಗೇಂ ಪ್ಲ್ಯಾನ್?

ಹಾಲೀ ವಿಧಾನಸಭೆಯ ಅಧಿವೇಶನ ಇಂದು ( ಫೆ 24) ಮುಕ್ತಾಯಗೊಳ್ಳಲಿದೆ. ಆ ಮೂಲಕ, ಮುಂದಿನ ವಿಧಾನಸಭಾ ಚುನಾವಣೆಗೆ ಸಾಂವಿಧಾನಿಕವಾಗಿ ಕರ್ನಾಟಕ ಸಜ್ಜಾಗಲಿದೆ. ಹಲವು ಶಾಸಕರಿಗೆ ಈ ಅಧಿವೇಶನವೇ ಕೊನೆಯ ಸೆಸನ್ ಆಗಲಿದೆ. ಯಡಿಯೂರಪ್ಪನವರು ಇದೇ ನನ್ನ ಕೊನೆಯ ಅಧಿವೇಶನ ಎಂದು ಘೋಷಿಸಿದ್ದಾಗಿದೆ.

ಮುಂಬರುವ ಚುನಾವಣೆಯೇ ನನ್ನ ಕೊನೆಯ ಇಲೆಕ್ಷನ್ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎನ್ನುವ ವಿಚಾರ ಇನ್ನೂ ಗೊಂದಲದ ಗೂಡಾಗಿ ಕೂತಿದೆ. ಕೆಲವೊಂದು ಮಾಧ್ಯಮಗಳ ಪ್ರಕಾರ ಇದಕ್ಕೆ ಕಾರಣ, ಕೋಲಾರದ ಆಂತರಿಕ ಸಮೀಕ್ಷೆಯಲ್ಲಿ ಸಿದ್ದರಾಮಯ್ಯನವರಿಗೆ ಗೆಲುವು ಸುಲಭದ ತುತ್ತಲ್ಲ ಎನ್ನುವುದು.

ವಿರೋಧ ಪಕ್ಷದ ನಾಯಕರು ಕೋಲಾರ, ಬಾದಾಮಿ, ವರುಣಾ ಕ್ಷೇತ್ರದಿಂದ ಸ್ಪರ್ಧಿಸಬಹುದು ಎನ್ನುವ ವಿಚಾರ ದಿನಕ್ಕೊಂದು ಆಯಾಮದಂತೆ ವೇಗ ಪಡೆದುಕೊಳ್ಳುತ್ತಿದೆ. ಇದಕ್ಕೆ ಪೂರಕವಾದ ವಿದ್ಯಮಾನಗಳು, ಚರ್ಚೆಗಳು ದಿನಂಪ್ರತಿ ನಡೆಯುತ್ತಿದೆ. ಹಾಗಾದರೆ, ಚುನಾವಣೆಗೆ ಇನ್ನೇನು ಒಂದೆರಡು ತಿಂಗಳು ಇದ್ದರೂ, ಸಿದ್ದರಾಮಯ್ಯನವರು ತಾವು ಸ್ಪರ್ಧಿಸುವ ಕ್ಷೇತ್ರವನ್ನು ಅಂತಿಮಗೊಳಿಸಲಿಲ್ಲವೇ?

ಕಳೆದ ಬಾರಿಯ ಚುನಾವಣೆಗೆ ಹೋಲಿಸಿದರೆ ಬಾಗಲಕೋಟೆ ಜಿಲ್ಲೆಯ ಬಾದಾಮಿ, ಸಿದ್ದರಾಮಯ್ಯನವರಿಗೆ ಸೇಫ್ ಕ್ಷೇತ್ರ. ಆದರೆ ಅಲ್ಲಿಂದ ಸ್ಪರ್ಧಿಸುವುದಿಲ್ಲ ಎಂದು ಅವರು ಹೇಳಿದ್ದಾಗಿದೆ. ಆ ಕ್ಷೇತ್ರದಿಂದ ಬಂದಿದ್ದ ಕಾಂಗ್ರೆಸ್ ಕಾರ್ಯಕರ್ತರು ನೀವು ಇಲ್ಲಿಂದ ಸ್ಪರ್ಧಿಸದೇ ಇದ್ದರೆ, ಸಾಮೂಹಿಕ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ಅದನ್ನು ನಯವಾಗಿ ನಿರಾಕರಿಸಿರುವ ಸಿದ್ದರಾಮಯ್ಯ, ಬೆಂಗಳೂರಿನಿಂದ ಬಾದಾಮಿ ದೂರ, ಹಾಗಾಗಿ ಅಲ್ಲಿಂದ ಸ್ಪರ್ಧಿಸಲಾರೆ ಎಂದು ಟ್ವೀಟ್ ಮೂಲಕ ಸ್ಪಷ್ಟ ಪಡಿಸಿದ್ದಾರೆ.

ಕೋಲಾರದಿಂದ ಸಿದ್ದರಾಮಯ್ಯನವರು ಸ್ಪರ್ಧಿಸುವುದು ಬಹುತೇಕ ಪಕ್ಕಾ ಆಗಿದೆ. ಆದರೂ, ಈ ವಿಚಾರದಲ್ಲಿ ಸ್ಪಷ್ಟತೆಯಿಲ್ಲ ಎನ್ನುವುದಕ್ಕೆ ಕಾರಣ ಕೋಲಾರ-ವರುಣಾ-ಬಾದಾಮಿ ಕ್ಷೇತ್ರದ ಸುತ್ತ ಹುಟ್ಟುತ್ತಿರುವ ಹೊಸಹೊಸ ಅಂತೆಕಂತೆ ಸುದ್ದಿಗಳು. ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯನವರು ಬಾದಾಮಿಯಿಂದಲೇ ಸ್ಪರ್ಧಿಸಬೇಕು ಎಂದು ಯಡಿಯೂರಪ್ಪನವರು ಹೇಳಿದ್ದಾರೆ. ಇನ್ನೊಂದು ಕಡೆ, ಬಿಜೆಪಿ ನಾಯಕ ವರ್ತೂರು ಪ್ರಕಾಶ್ ಅವರು ಇಲ್ಲ ಅವರು ವರುಣಾದಿಂದ ಸ್ಪರ್ಧಿಸುತ್ತಾರೆ ಎನ್ನುವ ಹೇಳಿಕೆಯನ್ನು ನೀಡಿದ್ದಾರೆ.

ಸಿದ್ದರಾಮಯ್ಯನವರ ರಾಜಕೀಯ ಶಿಷ್ಯ ಮುನಿರತ್ನ

ಮತ್ತೊಂದು ಕಡೆ, ಸಿದ್ದರಾಮಯ್ಯನವರ ವಿರುದ್ದ ಒಂದು ಕಾಲದ ಅವರ ರಾಜಕೀಯ ಶಿಷ್ಯ ಮುನಿರತ್ನ, ಕೋಲಾರದಿಂದ ಸ್ಪರ್ಧಿಸಲಿದ್ದಾರೆ ಎನ್ನುವ ಸುದ್ದಿಗಳೂ ಹರಿದಾಡುತ್ತಿವೆ. ಇದರ ನಡುವೆ, ಕೋಲಾರದ ಪ್ರಭಾವೀ ಮುಖಂಡ, ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಅವರನ್ನು ಎರಡು ಬಾರಿ ಭೇಟಿ ಮಾಡಿ ಅವರ ಮನವೊಲಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದು, ಸಿದ್ದು ಪರ ಪ್ರಚಾರದಲ್ಲಿ ಅವರು ತೊಡಗಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿಯೂ ಹರಿದಾಡುತ್ತಿದೆ.

ವರ್ತೂರು ಪ್ರಕಾಶ್ ಬಹಿರಂಗ ಸವಾಲು

ಎಲ್ಲೆಲ್ಲೋ ಹೋಗಿ ಸೋಲುವುದಕ್ಕಿಂತ ಧಮ್, ತಾಕತ್ ಇದ್ದರೆ ಬಾದಾಮಿಯಿಂದ ಸ್ಪರ್ಧಿಸಲಿ ಎನ್ನುವ ಸವಾಲು ಬಿಜೆಪಿ ನಾಯಕರಿಂದ ಬರುತ್ತಿದೆ. "ವರಿಷ್ಠರು ಸೂಚಿಸಿದರೆ ನಾನು ಕೋಲಾರದಿಂದ ಸ್ಪರ್ಧೆ ಮಾಡಲು ಸಿದ್ಧ, ಪಕ್ಷ ಎಲ್ಲಿ ಹೋಗಲು ಸೂಚನೆ ಕೊಡುತ್ತೋ ಅಲ್ಲಿ ಹೋಗಿ ಸ್ಪರ್ಧೆ ಮಾಡುತ್ತೇನೆ, ನಮ್ಮ ಪಕ್ಷ ದೊಡ್ಡದು" ಎಂದು ತೋಟಗಾರಿಕಾ ಸಚಿವ ಮುನಿರತ್ನ ಹೇಳುವ ಮೂಲಕ ಕಾಂಗ್ರೆಸ್ಸಿಗೆ ಮತ್ತೊಂದು ಸಂದೇಶವನ್ನು ರವಾನಿಸಿದ್ದಾರೆ. ಹೀಗಾಗಿ, ಸಿದ್ದರಾಮಯ್ಯನವರ ಕ್ಷೇತ್ರ ಯಾವುದು ಎನ್ನುವ ವಿಚಾರದಲ್ಲಿ ಇನ್ನೂ ಸ್ಪಷ್ಟತೆಯಿಲ್ಲ ಎನ್ನುವುದು ಒಂದು ಕಡೆಯಾದರೆ, ಇದರ ಹಿಂದೆ ರಾಜಕೀಯ ಲೆಕ್ಕಾಚಾರ ಅಡಗಿದೆಯಾ ಎನ್ನುವ ಚರ್ಚೆಯೂ ಹುಟ್ಟಿಕೊಂಡಿದೆ.

ಗೊಂದಲದ ಮೂಲ ಹುಡುಕಲು ಹೊರಟಾಗ

ಬಾದಾಮಿ-ವರುಣಾ-ಕೋಲಾರ ಎನ್ನುವ ಮೂಲಕ ಜೆಡಿಎಸ್ ಮತ್ತು ಬಿಜೆಪಿಗೆ ಸ್ಪಷ್ಟವಾದ ರಣತಂತ್ರ ರೂಪಿಸುವ ವಿಚಾರದಲ್ಲಿ ಗೊಂದಲ ಉಂಟಾಗಲಿ ಎನ್ನುವ ಕಾರಣಕ್ಕಾಗಿಯೇ ಮೂರು ಕ್ಷೇತ್ರಗಳ ಹೆಸರನ್ನು ಮುನ್ನಲೆಗೆ ತೇಲಿ ಬಿಡಲಾಗಿದೆ. ಇದೇ ಕ್ಷೇತ್ರವೆಂದು (ಉದಾಹರಣೆಗೆ ಡಿ.ಕೆ.ಶಿವಕುಮಾರ್ ಅವರಿಗೆ ಕನಕಪುರ) ನಿಕ್ಕಿಯಾದರೆ, ವಿರೋಧಿಗಳಿಗೆ ರಾಜಕೀಯ ಗೇಂ ಪ್ಲ್ಯಾನ್ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ಹಾಗಾಗಿ, ನಾಮಪತ್ರ ಸಲ್ಲಿಸಲು ಕೊನೆಯ ದಿನ ಹತ್ತಿರ ಬರುವವರೆಗೂ ಅಂತಿಮ ಕ್ಷೇತ್ರ ಯಾವುದು ಎನ್ನುವುದನ್ನು ಗೊಂದಲದಲ್ಲೇ ಇಡಲು ಕಾಂಗ್ರೆಸ್ ನಿರ್ಧರಿಸಿದೆಯಾ ಎನ್ನುವ ಚರ್ಚೆ ಆರಂಭವಾಗಿದೆ. ಆ ಮೂಲಕ, ಬಿಜೆಪಿ ಮತ್ತು ಜೆಡಿಎಸ್ ಗೆ ಸಮರ್ಥವಾದ ನಾಯಕನ ಹುಡುಕಾಟದಲ್ಲಿ ಹಿನ್ನಡೆಯಾಗಲಿ ಎನ್ನುವ ರಾಜಕೀಯ ಲೆಕ್ಕಾಚಾರವಿದೆಯಾ ಎನ್ನುವುದಿಲ್ಲಿ ಪ್ರಶ್ನೆ.