ಚಿಟಗುಪ್ಪಿ ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆ

ಚಿಟಗುಪ್ಪಿ ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆ

ಹುಬ್ಬಳ್ಳಿ : ಸರ್ಕಾರಿ ಆಸ್ಪತ್ರೆ ಅಂದ್ರೆ ಜನ ಮಾರುದ್ದ ಓಡ್ತಾರೆ. ಸರಿಯಾದ ಚಿಕಿತ್ಸೆ ಸಿಗೋದಿಲ್ಲ ಅನ್ನೋರೇ ಹೆಚ್ಚು. ಆದ್ರೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಚಿಟಗುಪ್ಪಿ ಆಸ್ಪತ್ರೆ ಖಾಸಗಿ ಆಸ್ಪತ್ರೆಗಿಂತ ಏನು ಕಡಿಮೆ ಇಲ್ಲ ಎನ್ನುವಷ್ಟು ಪ್ರಸಿದ್ಧಿ ಹೊಂದಿದೆ. ಕೊರೊನಾದ ಬಳಿಕ ಜನ ಈ ಆಸ್ಪತ್ರೆಯತ್ತ ಮುಗಿಬಿದ್ದಿದ್ದಾರೆ


ಹೌದು, ಹೀಗೆ ಯಾವ ಖಾಸಗಿ ಆಸ್ಪತ್ರೆಗೂ ಕಡಿಮೆ ಇಲ್ಲದ ರೀತಿಯಲ್ಲಿ ಸುಸಜ್ಜಿತ ಕಟ್ಟಡ, ಸ್ವಚ್ಚತೆ ಮತ್ತು ಚಿಕಿತ್ಸೆಯಿಂದಲೇ ಜನರ ಮೆಚ್ಚುಗೆ ಪಡೆಯುತ್ತಿದೆ ಹುಬ್ಬಳ್ಳಿ ನಗರದ ಚಿಟಗುಪ್ಪಿ ಆರೋಗ್ಯ ಕೇಂದ್ರ. ಪ್ರತಿ ಕೊಠಡಿಯನ್ನು ನಿತ್ಯವೂ ಸ್ವಚ್ಛಗೊಳಿಸಲಾಗುತ್ತಿದ್ದು, ಆಸ್ಪತ್ರೆಯ ಮೊದಲ ಮಹಡಿಯ ಸುತ್ತಲೂ ರಾಷ್ಟ್ರ ಕವಿಗಳ ಭಾವಚಿತ್ರಗಳನ್ನು ಹಾಕಲಾಗಿದೆ. ಇದು ಆಸ್ಪತ್ರೆಗೆ ಮತ್ತಷ್ಟು ಮೆರಗು ನೀಡಿದ್ದು, ಚಿಕಿತ್ಸೆಗೆ ಬರುವ ಜನರಲ್ಲಿ ಮತ್ತಷ್ಟು ಹೊಸ ಉತ್ಸಾಹ ಮೂಡಿಸಿದೆ. ಇದಲ್ಲದೇ ಉತ್ತಮ ಕಾರ್ಯ ಮಾಡಿದ ಸಿಬ್ಬಂದಿಗಳಿಗೆ ರಿವಾರ್ಡ್ ಕೂಡಾ ನೀಡಲಾಗುತ್ತಿದೆ.

ಚಿಟಗುಪ್ಪಿ ಆರೋಗ್ಯ ಕೇಂದ್ರಕ್ಕೆ ಆರೋಗ್ಯ ಅಧಿಕಾರಿಗಳಾಗಿ ಡಾ.ಶ್ರೀಧರ ದಂಡಪ್ಪನವರ ಅಧಿಕಾರ ಸ್ವೀಕಾರ ಮಾಡಿದ ನಂತರ ಆಸ್ಪತ್ರೆಯ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ಆಗಿದ್ದು, ಆಸ್ಪತ್ರೆಯಲ್ಲಿ ತಜ್ಞ ವೈದ್ಯರು ಸೇರಿದಂತೆ ಉತ್ತಮ ರೀತಿಯ ಸಿಬ್ಬಂದಿಗಳು ಇದ್ದಾರೆ. ಹೀಗಾಗಿ ಡಾ.ಶ್ರೀಧರ ನೇತೃತ್ವದ ತಂಡ ಸಾರ್ವಜನಿಕರಿಗೆ ಗುಣಮಟ್ಟದ ಚಿಕಿತ್ಸೆ ನೀಡುತ್ತಿದೆ. 

ಈ ಮೊದಲು ಜನರು ಪ್ರತಿಯೊಂದಕ್ಕೂ ಕಿಮ್ಸ್ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದರು ಆದರೆ ಇದೀಗ ಹುಬ್ಬಳ್ಳಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಜನರು ಚಿಟಗುಪ್ಪಿ ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಳ್ಳುತ್ತಿದ್ದಾರೆ.‌ ಹಾಗಾಗಿಯೇ ಆರೋಗ್ಯಾಧಿಕಾರಿಗಳೇ ಹೇಳುವಂತೆ ಕಳೆದ ಒಂದು ವರ್ಷಗಳಿಂದ ಆಸ್ಪತ್ರೆಯಲ್ಲಿ 1175 ಡೆಲಿವರಿ, 1135 ಮೈನರ್ ಆಪರೇಷನ್, 120 ಮೇಜರ್ ಹಾಗೂ 4231 ಕ್ಕೂ ಅಧಿಕ ಜನರು ಐಪಿಡಿ ಜನರಲ್ ಸೇವೆ ಪಡೆದಿದ್ದಾರೆ.ಅಲ್ಲದೇ ಕಳೆದ ಒಂದು ತಿಂಗಳಲ್ಲಿ ಈ ಸಂಖ್ಯೆ 126 ಡೆಲಿವರಿ, 136 ಮೈನರ್ ಆಪರೇಷನ್, 12 ಮೇಜರ್, 284 ಜನರಲ್ ಚಿಕಿತ್ಸೆ ಕೂಡಾ ಕೊಡಲಾಗಿದೆ. ಇನ್ನು ಜಿಲ್ಲೆಯಲ್ಲಿ ಅತಿ ಹೆಚ್ಚು ಕೋವಿಡ್ ವ್ಯಾಕ್ಸಿನೇಷನ್‌ ಮಾಡಿದ ಮೊದಲ ಆರೋಗ್ಯ ಕೇಂದ್ರ ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದು, ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಸಿಗುತ್ತಿರುವ ಕಾರಣ ಹುಬ್ಬಳ್ಳಿಯ ಬಹುತೇಕ ಜನರು ಇದೇ ಆರೋಗ್ಯ ಕೇಂದ್ರಕ್ಕೆ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. 

ಒಟ್ಟಾರೆ ಸರ್ಕಾರಿ ಆಸ್ಪತ್ರೆಗಳು ಎಂದರೆ ಈಗಿನ ಕಾಲದಲ್ಲಿ ಮೂಗುಮುರಿಯುವ ಜನರ ಮಧ್ಯೆ ಈ ಆಸ್ಪತ್ರೆ ಎಲ್ಲರ ಗಮನ ಸೆಳೆಯುತ್ತಿದೆ. ಯಾವ ನರ್ಸಿಂಗ್ ಹೋಮ್'ಗೂ ಕಡಿಮೆಯಿಲ್ಲದಂತೆ  ನಿರ್ವಹಣೆ ಆಗ್ತಾಯಿರೊದ್ರಿಂದ ಸಾರ್ವಜನಿಕ ಮೆಚ್ಚುಗೆಗೆ ಸರ್ಕಾರಿ ಆಸ್ಪತ್ರೆಯೊಂದು ಪಾತ್ರವಾಗಿದೆ.

ನವೀನ ಸೋಲಾರಗೊಪ್ಪ ನೈನ್ ಲೈವ್ ನ್ಯೂಸ್ ಹುಬ್ಬಳ್ಳಿ