ಬೇಡಿದ ವರ ನೀಡಿದ್ರೆ 5 ಸಾವಿರ ಕೊಡ್ತೀನಿ, ಹಾಸನಾಂಬೆ ತಾಯಿಗೆ ಆಫರ್ ಕೊಟ್ಟ ಭಕ್ತ
ಭಕ್ತರು ಬರೆದ ಚೀಟಗಳು
ನಿನ್ನ ಕೃಪೆಯಿಂದ ಹೊಳೆನರಸೀಪುದ ಎಂ.ಎಲ್.ಎ. ಬದಲಾಗಬೇಕು. ಜನರನ್ನು ಕಷ್ಟದಿಂದ ಪಾರುಮಾಡು H.D.ರೇವಣ್ಣ ಕುಟುಂಬ ಸದಸ್ಯರು ಜನರ ಪ್ರಾಣ ಹಿಂಡುತ್ತಿದ್ದಾರೆ. ಅವರ ಕುಟುಂಬದವರನ್ನೆಲ್ಲಾ ಸೋಲಿಸಿ ಬಿಡು ತಾಯಿ. ಅವರು ಮುಂದೆ ಯಾರನ್ನು ಬರಲು ಬಿಡುತ್ತಿಲ್ಲ. ಹೊಳೆನರಸೀಪುರ ಜನತೆಗೆ ಒಳ್ಳೆಯದು ಮಾಡು ತಾಯಿ ಎಂದು ಬರೆಯಲಾಗಿದೆ.
ನನ್ನ ದೊಡ್ಡಮಗನಿಗೆ ಮದುವೆ ಮಾಡು. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ.90 ಪರ್ಸಂಟೇಜ್ ಬರಲಿ. ಒಂದು ವರ್ಷದೊಳಗೆ ಮನೆ ಕಟ್ಟಿದರೆ 301 ಕಾಣಿಕೆ ಹಾಕುತ್ತೇನೆ, ಕೊರೊನ ತೊಲಗಿಸಿ ಎಲ್ಲರಿಗೂ ಒಳ್ಳೆಯ ಆರೋಗ್ಯ ಕೊಡು. ನಮ್ಮ ಬೀದಿಯ ರಸ್ತೆ ಗುಂಡಿ ಬಿದ್ದಿದೆ ಅದನ್ನು ಸರಿ ಮಾಡಿಸು ಎಂದು ಹಾಸನದ 35 ನೇ ವಾರ್ಡ್ ನ ವ್ಯಕ್ತಿಯೊಬ್ಬರು ದೇವಿಗೆ ಕಾಗದದಲ್ಲಿ ಬರೆದು ಮನವಿ ಮಾಡಿಕೊಳ್ಳಲಾಗಿದೆ.
ಐದು ಸಾವಿರ ಆಫರ್ ನೀಡಿದ ಭಕ್ತ
ತಾಯಿ ಬೇಗ ಪ್ರಮೋಷನ್ ಕೊಡಮ್ಮ, ಒಂದು ವರ್ಷದೊಳಗೆ ಇಬ್ಬರು ಹೆಣ್ಣುಮಕ್ಕಳಿಗೆ ಮದುವೆ ಮಾಡಿಸು. ಗಂಡು ಮಗು ಕರುಣಿಸು, ನಾನು ಬೇಡಿದ ವರವ ಕೊಟ್ಟರೆ ಐದು ಸಾವಿರ ಕೊಡ್ತೇನೆ ಎಂದು ಭಕ್ತರೊಬ್ಬರು ದೇವರಿಗೆ ಐದು ಸಾವಿರ ಆಫರ್ ಕೊಟ್ಟು ಪತ್ರ ಬರೆದಿದ್ದಾರೆ.
: ಹಾಸನಾಂಬೆ ದೇವಾಲಯದ ಇತಿಹಾಸ ಇಲ್ಲಿದೆ
ಗಂಡನ ಕುಡಿತದ ಚಟ ಹೋಗಲಿ ಎಂದು ಮಹಿಳೆಯೊಬ್ಬರು ಪತ್ರ ಬರೆದ್ರೆ, ತಾನು ಇಷ್ಟಪಟ್ಟ ಹುಡುಗನ ಜೊತೆ ಮದುವೆ ಮಾಡು ಎಂದು ಯುವತಿ ರಕ್ತದಲ್ಲಿ ಪತ್ರ ಬರೆದಿದ್ದಾಳೆ. ಜಿಲ್ಲಾ ಕಸಾಪ ಪರಿಷತ್ ಗೆ ಸಾಹಿತಿ ಡಾ.ಎಚ್.ಎಲ್.ಮಲ್ಲೇಶ್ ಗೌಡರನ್ನು ಅಧ್ಯಕ್ಷರಾಗುವಂತೆ ಅನುಗ್ರಹಿಸು ತಾಯಿ ಅಂತಾನೂ ಬರೆಯಲಾಗಿದೆ.
ಜಿಲ್ಲಾ ಉಸ್ತುವಾರಿ ಕೆ.ಗೋಪಾಲಯ್ಯ, ಶಾಸಕ ಪ್ರೀತಂಗೌಡ, ಅಧಿಕಾರಿಗಳ ಸಮ್ಮುಖದಲ್ಲಿ ದೇಗುಲದ ಗರ್ಭಗುಡಿಯ ಬಾಗಿಲು ಮುಚ್ಚಲಾಯ್ತು. ಗರ್ಭಗುಡಿ ಬಾಗಿಲು ಮುಚ್ಚುವ ಮುನ್ನ ದೇವರ ಮುಂದೆ ದೀಪ ಹಚ್ಚಿ, ಹೂವು, ನೈವೈದ್ಯ ಇರಿಸಿದರು. ಮುಂದಿನ ವರ್ಷ ಬಾಗಿಲು ತೆರೆಯುವವರೆಗೂ ಹೂವು ಬಾಡುವುದಿಲ್ಲ, ದೀಪ ಆರುವುದಿಲ್ಲ. ಇಂದು ಶಾಸ್ತ್ರೋಕ್ತವಾಗಿ ಗರ್ಭಗುಡಿ ಬಾಗಿಲು ಮುಚ್ಚಲಾಯ್ತು.
ಯಾರೂ ನಿರಾಸೆಯಿಂದ ಹೋಗಿಲ್ಲ.
ಹಾಸನಾಂಬೆ ಗರ್ಭಗುಡಿ ಬಾಗಿಲು ಮುಚ್ಚಿದ ನಂತರ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಹಾಸನಾಂಬೆ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಯಶಸ್ವಿಯಾಗಿ ನಡೆದಿದೆ.. ನಾಲ್ಕು ಲಕ್ಷಕ್ಕಿಂತ ಹೆಚ್ಚು ಭಕ್ತರು ದೇವಿ ದರ್ಶನ ಪಡೆದಿದ್ದಾರೆ. ಯಾರೂ ನಿರಾಸೆಯಿಂದ ಹೋಗಿಲ್ಲ. ಕಳೆದ ಬಾರಿ ಕೊರೊನದಿಂದ ಸಾರ್ವಜನಿಕರಿಗೆ ದರ್ಶನ ಸಿಕ್ಕಿರಲಿಲ್ಲ. ಈ ಬಾರಿ ಎಲ್ಲರಿಗೂ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ್ದರು