ಶಾಸಕರಾದ ಶಿವಲಿಂಗೇಗೌಡ ಹಾಗೂ ರಾಮಸ್ವಾಮಿ ಪಕ್ಷ​ ಬಿಡುವ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಿಷ್ಟು

ಶಾಸಕರಾದ ಶಿವಲಿಂಗೇಗೌಡ ಹಾಗೂ ರಾಮಸ್ವಾಮಿ ಪಕ್ಷ​ ಬಿಡುವ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಿಷ್ಟು

ಹಾಸನ: ಶಾಸಕ ಕೆ.ಎಂ ಶಿವಲಿಂಗೇಗೌಡ ಹಾಗೂ ಎ.ಟಿ ರಾಮಸ್ವಾಮಿ, ಜೆಡಿಎಸ್ ಪಕ್ಷ ತೊರೆಯುವ ವಿಚಾರದ ಬಗ್ಗೆ ಕುಮಾರಸ್ವಾಮಿ ಮಾತನಾಡಿದ್ದಾರೆ.

ಈ ವಿಚಾರವಾಗಿ 'ಮೂರು ಅವಧಿಯಿಂದ ಶಿವಲಿಂಗೇಗೌಡರು ನಮ್ಮ ಜೊತೆ ಇದ್ದಾರೆ, ಪಕ್ಷ ಆಧಾರದ ಮೇಲೆ ಗೆದ್ದಿದ್ದಾರೆ.

ಈಗಲೂ ಕೂಡ ನಮ್ಮ ಶಿವಲಿಂಗೇಗೌಡ್ರು ನಮ್ಮ ಜೊತೆ ಇರ್ಬೇಕು ಅಂತ ನಮ್ಮ ಇಚ್ಛೆ. ಅವರಿಗೆ ಇವತ್ತು ಕೂಡ ನಮ್ಮ ಪಕ್ಷದ ಬಾಗಿಲು ಮುಚ್ಚಿಲ್ಲ. ನಮ್ಮ ರಾಮಸ್ವಾಮಿಯವರು ಕೂಡ ಅಷ್ಟೇ. ಅವರು ಒಬ್ಬ ಹಿರಿಯ ಶಾಸಕರು. ಅವರದ್ದೇ ಆದ ರೀತಿಯಲ್ಲಿ ಸಂಘಟನೆ, ಸೇವೆ ಮಾಡಿದ್ದಾರೆ.

ಅವರು ಕೂಡ ನಮ್ಮ ಜೊತೆ ಇರಬೇಕು ಅನ್ನೋದು ನಮ್ಮ ಆಸೆ. ಶಿವಲಿಂಗೇಗೌಡರಿಗೆ ಯಾವ ರೀತಿ ಬೇಜಾರಾಗಿದೆ, ಏನು ವ್ಯಾತ್ಯಾಸ ಆಗಿದೆ ಅನ್ನೋದನ್ನ ಹೈಕಮಾಂಡ್, ನಮ್ಮ ಹತ್ರ, ಮಾಧ್ಯಮದ ಮುಂದೆ ಸ್ಪಷ್ಟಪಡಿಸಿಬೇಕು. ಸ್ಪಷ್ಟ ಮಾಡದೇ ಮೊಗುಮ್ಮಾಗಿ ಇದ್ರೆ ಸಹಜವಾಗಿ ಅನುಮಾನಗಳು ಏಳುತ್ತವೆ. ಮೊನ್ನೆ ರೇವಣ್ಣ ಅವರ ಮನೆ ಹತ್ತಿರ ಅರಕಲಗೂಡು ಕಾರ್ಯಕರ್ತರು ಹೋಗಿದ್ದರು. ಹೇಗೆ ಹೋದ್ರು, ಯಾಕೆ ಹೋದ್ರು?

ಕಾರ್ಯಕರ್ತರು ಅವರವರ ಅಭಿಪ್ರಾಯಗಳನ್ನು ಹೇಳಲು ಸ್ವತಂತ್ರರಿದ್ದಾರೆ. ಅದನ್ನು ನಾವು ಕೂಡ ತೀವ್ರವಾಗಿ ಪರಿಗಣಿಸುತ್ತೇವೆ. ಯಾಕೆ ಹೀಗೆ ಆಗುತ್ತಿದೆ ಎಂದು ನಾಯಕರನ್ನು ಕೇಳಿ. ನಿಮ್ಮನ್ನು ಕೇಳಿ ನಾವು ಅಂತಿಮವಾಗಿ ಬಗೆಹರಿಸುತ್ತೇವೆ ಅಂತ ರೇವಣ್ಣ ಮಾತು ಕೊಟ್ಟಿದ್ದಾರೆ.

ಸದ್ಯದಲ್ಲೇ ಅದರ ಬಗ್ಗೆ ಚರ್ಚೆ ಆಗುತ್ತೆ. ಕಾರ್ಯಕರ್ತರಿಗೆ ಪ್ರಚೋದನೆ ಆಗಿದೆ ಅಂತ ನನಗೆ ಅನ್ನಿಸುತ್ತಿಲ್ಲ. ಕಾರ್ಯಕರ್ತರು ಅವರಾಗಿಯೇ ಬಂದಾಗ ಸಹಜವಾಗಿ ಅದನ್ನು ಪರಿಗಣಿಸಬೇಕಾಗುತ್ತದೆ, ಚರ್ಚೆ ಮಾಡಬೇಕಾಗುತ್ತದೆ. ಆದರೆ ಇದುವರೆಗೂ ಕೂಡ ಯಾವುದು ಅಂತಿಮವಾಗಿಲ್ಲ' ಎಂದಿದ್ದಾರೆ.

ಒಟ್ಟಿನಲ್ಲಿ ಕುಮಾರಸ್ವಾಮಿ ಮಾತಿನ ಪ್ರಕಾರ ಏನೇ ಅಸಮಾಧಾನ ಇದ್ದರೂ ಹೈಕಮಾಂಡ್​ ಬಳಿಗೆ ಬಂದು ಅದನ್ನು ಹೇಳಬೇಕು. ಇಲ್ಲವಾದರೆ ಅಸಮಾಧಾನ ಬಗೆಹರಿಯುವುದಿಲ್ಲ.