ಇಷ್ಟಪಟ್ಟಿದ್ದರೆ ಇಬ್ಬರೂ ಮದುವೆ ಆಗಬಹುದಿತ್ತು; ರೋಹಿಣಿ ಬಗ್ಗೆ ಡಿಕೆ ರವಿ ತಾಯಿ ಹೇಳಿದ್ದೇನು?

ರಾಮನಗರ: ಡಿ.ರೂಪಾ ಮೌದ್ಗಿಲ್ ಹಾಗೂ ರೋಹಿಣಿ ಸಿಂಧೂರಿ ಇಬ್ಬರೂ ಕೂಡ ತಮ್ಮ ಜಗಳದಲ್ಲಿ ನನ್ನ ಮಗ ಹೆಸರು ತರಬೇಡಿ. ನನ್ನ ಮಗ ಮೃತಪಟ್ಟ 8 ವರ್ಷ ಕಳೆದಿದೆ. ಆತನ ಹೆಸರಿಗೆ ಕಳಂಕ ಹಚ್ಚಬೇಡಿ ಎಂದು ದಿವಂಗತ ಐಪಿಎಸ್ ಅಧಿಕಾರಿ ಡಿ.ಕೆ.ರವಿ ತಾಯಿ ಗೌರಮ್ಮ ಮನವಿ ಮಾಡಿದ್ದಾರೆ.
ಜಿಲ್ಲೆಯ ಕದರಮಂಗಲ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಗೌರಮ್ಮ, ನನ್ನ ಮಗ ಡಿ.ಕೆ.ರವಿ ಸಾವಿಗೆ ರೋಹಿಣಿ ಸಿಂಧೂರಿ ಹೊಣೆಯಲ್ಲ, ಅವರಿಬ್ಬರು ಸ್ನೇಹಿತರು, ಅವರಿಬ್ಬರು ಒಟ್ಟಿಗೆ ಓದುತ್ತಿದ್ದರು. ಆವಾಗ ನನಗೂ ಪೋನ್ ಮಾಡಿ ಮಾತನಾಡುತ್ತಿದ್ದರು, ಅವರ ಇಷ್ಟಪಟ್ಟಿದ್ದರೆ ಆ ಸಮಯದಲ್ಲೇ ಇಬ್ಬರು ಮದುವೆಯಾಗಬಹುದಿತ್ತು. ಅದಕ್ಕೆ ಯಾರ ವಿರೋಧವೂ ಇರಲಿಲ್ಲ. ಹೀಗಾಗಿ ಅವರ ಮೇಲೆ ಏನೂ ಹೇಳುವುದಿಲ್ಲ ಎಂದರು.
ನಮ್ಮ ಮನೆಗೆ ರೋಹಿಣಿ ಸಿಂಧೂರಿ 3 ಬಾರಿ ಬಂದಿದ್ದಾರೆ. ಡಿ.ಕೆ.ರವಿಯ ಸಾಮಾಜಿಕ ಕಳಕಳಿ ಕಂಡು ನನಗೂ ಮಾರ್ಗದರ್ಶನ ಮಾಡು ಎಂದು ರೋಹಿಣಿ ನನ್ನ ಮುಂದೆಯೇ ಕೇಳಿದ್ದಾಳೆ. ರೋಹಿಣಿ ಸಿಂಧೂರಿ ಮೇಲೆ ಅಪರಾಧ ಹೊರಿಸಲು ರೂಪಾ ಅವರು ನನ್ನ ಮಗನ ಹೆಸರನ್ನು ತಂದಿದ್ದಾರೆ. ನಿಮ್ಮಿಬ್ಬರ ಜಗಳದಲ್ಲಿ ನನ್ನ ಮಗನ ಹೆಸರು ತರ ಬೇಡಿ, ನೀವೇ ಆಗಲಿ ರಾಜಕಾರಣಿಗಳೇ ಅಗಲಿ ಯಾವುದೆ ವಿಚಾರಕ್ಕೆ ನನ್ನ ಮಗನ ಹೆಸರು ತಾಳೆ ಹಾಕುವುದು ಬೇಡ ಎಂದು ತಿಳಿಸಿದರು.
ನನ್ನ ಮಗನಿಗೆ ಇದ್ದಷ್ಟು ಅಧಿಕಾರ ನಿಮಗೂ ಇದೆ, ನಿಮ್ಮ ಅಧಿಕಾರ ಬಳಸಿಕೊಂಡು ಜನರಿಗೆ ಉಪಕಾರ ಮಾಡಿ. ಅನವಶ್ಯಕವಾದ ಫೋಟೋಗಳನ್ನು ಮತ್ತು ಇಲ್ಲಸಲ್ಲದ ಆರೋಪ ಹೊರಿಸುತ್ತಾ ನನ್ನ ಮಗನ ಹೆಸರು ತರಬೇಡಿ ಎಂದದರು.
“ನಾನು ಮುಖ್ಯಮಂತ್ರಿ ಆಗುತ್ತೇನೆ ಮನೆಗೊಬ್ಬರಿಗೆ ಕೆಲಸ ಕೊಡುತ್ತೇನೆ ಎಂದು ಹೇಳುತ್ತಿದ್ದ’ ನನ್ನ ಮಗ ಅಪರಂಜಿ. ಅವನ ನಡೆ ನುಡಿಗಳನ್ನು ಜನರು ಕೊಂಡಾಡುತ್ತಿದ್ದಾರೆ, ನಿಮ್ಮಗಳ ರಂಪಾಟ ನೋಡಿ ಜನರು ನನಗೆ ರಾಜ್ಯದ ವಿವಿಧ ಭಾಗಗಳಿಂದ ಫೋನ್ ಮಾಡಿ ಡಿ.ಕೆ. ರವಿ ಬಗ್ಗೆ ಒಳ್ಳೆಯ ಮಾತನಾಡುತ್ತಿದ್ದರು. ಕೂಡಲೇ ಇಬ್ಬರೂ ಈ ಜಗಳ ನಿಲ್ಲಿಸಿ ಸರ್ಕಾರಿ ಕೆಲಸ ದೇವರ ಕೆಲಸ ಎಂದು ಸಾರ್ವಜನಿಕರು ನೋಂದವರಿಗೆ ನ್ಯಾಯ ದೊರಕಿಸಿ ಕೊಡಿ ಎಂದು ತಿಳಿಹೇಳಿದ್ದಾರೆ.