ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ; ಮನೆ ಮನೆ ಸಮೀಕ್ಷೆ ಕಾರ್ಯ ಯಶಸ್ವಿ

ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಅಂಗವಾಗಿ, ನವೆಂಬರ್ 20ರ ಭಾನುವಾರದಿಂದ ಧಾರವಾಡ ಜಿಲ್ಲೆಯಾದ್ಯಂತ ಎಲ್ಲಾ 1,636 ಮತಗಟ್ಟೆಗಳಲ್ಲಿ ಆರಂಭವಾಗಿರುವ ಮನೆ ಮನೆ ಸಮೀಕ್ಷೆ ಕಾರ್ಯಕ್ಕೆ, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಧಾರವಾಡ
ಜಿಲ್ಲಾಧಿಕಾರಿ ಗುರುದತ್ ಹೆಗಡೆ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಪವಿತ್ರ ಹಕ್ಕು ಮತ್ತು ಕರ್ತವ್ಯವಾಗಿದೆ. ಅರ್ಹ ಮತದಾರರು ಈ ಹಕ್ಕಿನಿಂದ ವಂಚಿತರಾಗಬಾರದು ಎಂಬ ಆಶಯದೊಂದಿಗೆ ಚುನಾವಣಾ ಆಯೋಗದ ನಿರ್ದೇಶನದನ್ವಯ, ನ.20ರಿಂದ ಜಿಲ್ಲೆಯ ಧಾರವಾಡ, ಹುಬ್ಬಳ್ಳಿ ನಗರ ಮತ್ತು ಗ್ರಾಮೀಣ, ಕುಂದಗೋಳ, ಕಲಘಟಗಿ, ನವಲಗುಂದ, ಅಣ್ಣಿಗೇರಿ ಮತ್ತು ಅಳ್ನಾವರ ತಾಲೂಕುಗಳಲ್ಲಿ ಇರುವ ಎಲ್ಲಾ 1,636 ಮತಗಟ್ಟೆಗಳ ವ್ಯಾಪ್ತಿಯ ಎಲ್ಲಾ ಮತಗಟ್ಟೆ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ, ಮನೆ ಮನೆಗೆ ತೆರಳಿ ಮತದಾರರ ಪಟ್ಟಿಯ ಪರಿಶೀಲನೆ ಕಾರ್ಯ ನಡೆಸುತ್ತಿದ್ದಾರೆ. ಮನೆ ಮನೆ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದ್ದು, ಡಿಸೆಂಬರ್ 12ರವರೆಗೆ ನಡೆಯಲಿದೆ.
ಬರುವ ಡಿಸೆಂಬರ್ 3 ಶನಿವಾರ ಹಾಗೂ ಡಿಸೆಂಬರ್ 4 ಭಾನುವಾರದಂದು ಪುನಃ ಜಿಲ್ಲೆಯಾದ್ಯಂತ ವಿಶೇಷ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. 18 ವರ್ಷ ತುಂಬಿದ ಹೊಸ ಮತದಾರರ ಸೇರ್ಪಡೆ, ವರ್ಗಾವಣೆ, ತೆಗೆದು ಹಾಕುವುದು, ಆಧಾರ್ ಜೋಡಣೆ ಮತ್ತಿತರ ಕಾರ್ಯಗಳನ್ನು ಅಗತ್ಯ ದಾಖಲೆಗಳೊಂದಿಗೆ ಸಾರ್ವಜನಿಕರು ಮಾಡಿಕೊಳ್ಳಬಹುದು.
ವೋಟರ್ ಹೆಲ್ಪ್ ಲೈನ್, ಮೊಬೈಲ್ ಆ್ಯಪ್ ಮೂಲಕವೂ ಈ ತಿದ್ದುಪಡಿಗಳನ್ನು ತ್ವರಿತವಾಗಿ ದಾಖಲಿಸಿಕೊಳ್ಳಲು, ಮತದಾರರಿಗೆ ಮುಕ್ತ ಅವಕಾಶವಿದೆ. ನವೆಂಬರ್ 9 ರಂದು ಸಮಗ್ರ ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದ್ದು, ಆಕ್ಷೇಪಣೆಗಳನ್ನು ಸಲ್ಲಿಸಲು ಡಿಸೆಂಬರ್ 8ರ ವರೆಗೆ ಅವಕಾಶವಿದೆ. ಡಿಸೆಂಬರ್ 26 ರೊಳಗೆ ಆಕ್ಷೇಪಣೆಗಳನ್ನು ವಿಲೇವಾರಿ ಮಾಡಲಾಗುವುದು.
2023ರ ಜನೆವರಿ 3 ರೊಳಗೆ ಆಯೋಗದ ಮಾನದಂಡಗಳನ್ವಯ ಪರಿಶೀಲಿಸಿ, ಅಂತಿಮ ಮತದಾರರ ಪಟ್ಟಿಗೆ ಚುನಾವಣಾ ಆಯುಕ್ತರ ಅನುಮೋದನೆ ಪಡೆದು, ಜನವರಿ 5 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.
9 ಲೈವ್ ನ್ಯೂಸ್ ಧಾರವಾಡ