ವಿದ್ಯುತ್ ಪೂರೈಕೆ'ಯಲ್ಲಿ ವ್ಯತ್ಯಯ: 'ಸೆಸ್ಕಾಂ ಕಛೇರಿ' ಮುಂದೆ ಮದ್ದೂರಿನ 'ಕೆ.ಕೋಡಿಹಳ್ಳಿ ರೈತ'ರ ಪ್ರತಿಭಟನೆ
ಮಂಡ್ಯ: ಕೃಷಿ ಪಂಪ್ ಸೆಟ್ ಗಳಿಗೆ ಸಮರ್ಪಕ ವಿದ್ಯುತ್ ಪೂರೈಸುವಂತೆ ಒತ್ತಾಯಿಸಿ ಮದ್ದೂರು ತಾಲೂಕಿನ ಕೆ.ಕೋಡಿಹಳ್ಳಿ ರೈತರು ಸೆಸ್ಕಾಂ ಉಪ ವಿಭಾಗದ ಕಛೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ರೈತ ಮುಖಂಡ ಶ್ರೀನಿವಾಸ್ ನೇತೃತ್ವದಲ್ಲಿ ಗ್ರಾಮದಿಂದ ಆಗಮಿಸಿದ್ದ ನೂರಾರು ರೈತರು ಸೆಸ್ಕಾಂ ಕಛೇರಿಗೆ ಮುತ್ತಿಗೆ ಹಾಕಿ ಧರಣಿ ನಡೆಸಿದರು.
ರೈತ ಮುಖಂಡ ಶ್ರೀನಿವಾಸ್ ಮಾತನಾಡಿ, ಸರ್ಕಾರ ನಿಗದಿ ಪಡಿಸಿರುವಂತೆ ಕೃಷಿ ಪಂಪ್ ಸೆಟ್ ಗಳಿಗೆ 7 ಗಂಟೆ ಕಾಲ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕೆಂದು ಆದೇಶ ನೀಡಿದೆ. ಆದರೆ, ಸೆಸ್ಕಾಂ ಅಧಿಕಾರಿಗಳು ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಬೇಕಾಬಿಟ್ಟಿ ವಿದ್ಯುತ್ ಪೂರೈಕೆ ಮಾಡುತ್ತಿದ್ದಾರೆ. ಇದರಿಂದ ಬೇಸಿಗೆಯಲ್ಲಿ ಬೆಳೆಗಳಿಗೆ ಸಮರ್ಪಕ ನೀರಿನ ಸೌಲಭ್ಯವಿಲ್ಲದೆ ಒಣಗುವ ಹಂತಕ್ಕೆ ಬಂದಿದೆ ಎಂದು ಆರೋಪಿಸಿದರು.
ಸೆಸ್ಕಾಂ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು 7 ಗಂಟೆಗಳ ಕಾಲ ಕೃಷಿ ಪಂಪ್ ಸೆಟ್ ಗಳಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡುವ ಮೂಲಕ ಬೆಳೆಗಳ ರಕ್ಷಣೆ ಮಾಡಬೇಕು ಇಲ್ಲವಾದಲ್ಲಿ ಬೆಳೆ ಹಾನಿಗೆ ಸೂಕ್ತ ಪರಿಹಾರ ಕೊಡಬೇಕಾಗುತ್ತದೆ ಎಂದು ಎಚ್ಚರಿಸಿದರು. ನಂತರ ಸೆಸ್ಕಾಂ ಎಇಇ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಜಯರಾಂ, ಶಂಕರ್, ಶ್ರೀಧರ್, ಶಿವರಾಂ, ಶಿವರಾಜ್, ಗಿರೀಶ್, ರಾಜು, ದೇವರಾಜ್, ಸುರೇಂದ್ರ ಕುಮಾರ್, ಲೋಹಿತ್, ರವಿ, ಚಂದ್ರ ಮತ್ತಿತರರು ಇದ್ದರು.
ವರದಿ: ಗಿರೀಶ್ ರಾಜ್, ಮಂಡ್ಯ