ಹಸೆಮಣೆ ಏರಲು ರೆಡಿಯಾದ ʼಶೇರ್‌ಷಾʼ ಜೋಡಿ: ಮುಂದಿನ ವರ್ಷ ಈ ದಿನ ಸಿದ್ದಾರ್ಥ್‌ - ಕಿಯಾರ ಮದುವೆ

ಹಸೆಮಣೆ ಏರಲು ರೆಡಿಯಾದ ʼಶೇರ್‌ಷಾʼ ಜೋಡಿ: ಮುಂದಿನ ವರ್ಷ ಈ ದಿನ ಸಿದ್ದಾರ್ಥ್‌ - ಕಿಯಾರ ಮದುವೆ

ಮುಂಬಯಿ: ಬಿಟೌನ್‌ ನಲ್ಲಿ ಮತ್ತೊಂದು ಜೋಡಿ ಹಸೆಮಣೆ ಏರಲು ಸಿದ್ದರಾಗಿದ್ದಾರೆ. ಸಿದ್ಧಾರ್ಥ್ ಮಲ್ಹೋತ್ರಾ – ಕಿಯಾರಾ ಅಡ್ವಾಣಿ ಡೇಟಿಂಗ್‌ ನಲ್ಲಿದ್ದ ವದಂತಿಗೆ ಮದುವೆಯ ಮುದ್ರೆ ಬೀಳುವ ಕುರಿತು ವರದಿಯೊಂದು ಹೊರ ಬಿದ್ದಿದೆ.

ಕಳೆದ ಕೆಲ ಸಮಯದಲ್ಲಿ ಬಿಟೌನ್‌ ನಲ್ಲಿ ಪ್ರೇಮ ಪಕ್ಷಿಗಳಾಗಿ ಅನೇಕ ಬಾರಿ ಜೊತೆಯಾಗಿ ಕಾಣಿಸಿಕೊಂಡಿದ್ದ ಕಿಯಾರಾ ಹಾಗೂ ಸಿದ್ದಾರ್ಥ್‌ ಡೇಟಿಂಗ್‌ ನಲ್ಲಿದ್ದರೂ ಅದನ್ನು ಅಧಿಕೃತವಾಗಿ ಎಲ್ಲೂ ಹೇಳಿಕೊಂಡಿಲ್ಲ.

ಇತ್ತೀಚೆಗೆ ಮುಂಬೈ ಏರ್‌ ಪೋರ್ಟ್‌ ನಲ್ಲಿ ಒಬ್ಬರ ನಂತರ ಒಬ್ಬರು ಸಿದ್ದಾರ್ಥ್‌ ಹಾಗೂ ಕಿಯಾರ ಕಾಣಿಸಿಕೊಂಡಿದ್ದರು. ಇಬ್ಬರು ಜೊತೆಯಾಗಿಯೇ ಹೊಸ ವರ್ಷವನ್ನು ಸಂಭ್ರಮಿಸಲು ವಿದೇಶಕ್ಕೆ ತೆರಳಿದ್ದಾರೆ ಎನ್ನಲಾಗುತ್ತಿದೆ.

ಇಟಿ ಟೈಮ್ಸ್‌ ವರದಿ ಪ್ರಕಾರ, ಡೇಟಿಂಗ್‌ ನಲ್ಲಿದ್ದ ಕಿಯಾರ- ಸಿದ್ದಾರ್ಥ್‌ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ. 2023 ರ ಫೆಬ್ರವರಿ ಮೊದಲ ವಾರದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಅದ್ದೂರಿಯಾಗಿ ಬಿಟೌನ್‌ ಜೋಡಿ ಹಸೆಮಣೆ ಏರಲಿದೆ ಎಂದಿದೆ. ಫೆ.5,6 ರಂದು ಹಳದಿ ಶಾಸ್ತ್ರ, ಮೆಹೆಂದಿ ಸಂಭ್ರಮ ನಡೆಯಲಿದ್ದು, ಫೆ. 6 ರಂದು ರಾಜಸ್ಥಾನದ ಜೈಸ್ಲಾಮ್ ಪ್ಯಾಲೇಸ್‌ ಹೋಟೆಲ್ ನಲ್ಲಿ ಮದುವೆ ನಡೆಯಲಿದೆ ಎಂದು ವರದಿ ತಿಳಿಸಿದೆ.

ಫೆ.3 ರಂದು ಭದ್ರತೆಯನ್ನು ಪರಿಶೀಲಿಸಲು ಸಿಬ್ಬಂದಿಗಳನ್ನು ಹೊಟೇಲ್‌ ಗೆ ಕಳುಹಿಸಲಾಗುತ್ತದೆ ಎಂದು ವರದಿ ತಿಳಿಸಿದೆ. 2021 ರಲ್ಲಿ ʼಶೇರ್​ಷಾʼ ಸಿನಿಮಾದಲ್ಲಿ ಕಿಯಾರಾ ಹಾಗೂ ಸಿದ್ದಾರ್ಥ್‌ ಸ್ಕ್ರೀನ್‌ ಹಂಚಿಕೊಂಡಿದ್ದರು. ಆ ಬಳಿಕ ಇಬ್ಬರು ಹಲವು ಬಾರಿ ಆಪ್ತವಾಗಿ ಕಾಣಿಸಿಕೊಂಡಿದ್ದರು.