ಕರಾವಳಿಯ ಹಿರಿಯ ಉದ್ಯಮಿ ಕೆ.ಸೇಸಪ್ಪ ಕೋಟ್ಯಾನ್ ನಿಧನ: ಗಣ್ಯರ ಸಂತಾಪ
ಮಂಗಳೂರು, ಜನವರಿ 27: ಶುಭ ಬೀಡಿ ಮೂಲಕ ಕರಾವಳಿಯಾದ್ಯಾಂತ ಬಡ ಜನರಿಗೆ ಉದ್ಯೋಗ ಸೃಷ್ಠಿಸಿದ ಉದ್ಯಮಿ, ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕೆ.ಸೇಸಪ್ಪ ಕೋಟ್ಯಾನ್ ಅಲ್ಪ ಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಶುಭ ಬೀಡಿಗಳು ಹೆಸರಿನಲ್ಲಿ ಬೀಡಿ ಉದ್ಯಮ ಆರಂಭಿಸಿ, ಸಹಸ್ರಾರು ಮಂದಿಗೆ ಉದ್ಯೋಗದಾತರಾಗಿರುವ ಸೇಸಪ್ಪ ಕೋಟ್ಯಾನ್, ಬಳಿಕ ಶುಭಲಕ್ಷ್ಮೀ ಟ್ರಾವೆಲ್ಸ್ ಮೂಲಕ ಗ್ರಾಮೀಣ ಭಾಗಗಳಿಗೆ ಬಸ್ ಸಂಪರ್ಕವನ್ನೂ ಕಲ್ಪಿಸಿದರು.
ಸತತ 26 ವರ್ಷಗಳಿಂದ ಬೈಟ್ ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿದ್ದ ಸೇಸಪ್ಪ ಕೋಟ್ಯಾನ್, ಹಲವು ದೈವ, ದೇವಸ್ಥಾನಗಳ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ, ಸಮಿತಿಯ ನೇತೃತ್ವ ವಹಿಸಿದ್ದರು.
ಕೊರೊನಾ ಸಂದರ್ಭದಲ್ಲಿ 1500 ಕುಟುಂಬಗಳಿಗೆ ತಲಾ 25 ಕೆ.ಜಿ ಅಕ್ಕಿ ಮತ್ತು ತಲಾ 500 ರೂಪಾಯಿ ನೀಡಿ ಸೇಸಪ್ಪ ಕೋಟ್ಯಾನ್ ನೆರವಾಗಿದ್ದರು. ಕಾರ್ಮಿಕ ಚಟುವಟಿಕೆಗಳಿಗೆ ಸದಾ ತೊಡಗಿಸಿಕೊಳ್ಳುತ್ತಿದ್ದ ಸೇಸಪ್ಪ ಕೋಟ್ಯಾನ್ ಕೊಡುಗೈ ದಾನಿಯಾಗಿದ್ದರು. ಸೇಸಪ್ಪ ಕೋಟ್ಯಾನ್ ಅವರ ಸೇವೆಗೆ ಸರ್ಕಾರ ಈ ಬಾರಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು.
ಸೇಸಪ್ಪ ಕೋಟ್ಯಾನ್ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ಸುನೀಲ್ ಕುಮಾರ್, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಸೇರಿದಂತೆ ಜಿಲ್ಲೆಯ ಸರ್ವಪಕ್ಷಗಳ ಜನಪ್ರತಿನಿಧಿಗಳು ಸಂತಾಪ ಸೂಚಿಸಿದ್ದಾರೆ.
ಸೇಸಪ್ಪ ಪೂಜಾರಿಯವರು ಪತ್ನಿ, ಪುತ್ರ ಮತ್ತು ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ. ಪಚ್ಚಿನಡ್ಕದ ಶುಭ ನಿಲಯದಲ್ಲಿ ಸಾರ್ವಜನಿಕ ದರ್ಶನದ ಬಳಿಕ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.