ಅದಾನಿಯ ಕಿರಿಯ ಪುತ್ರ ಜೀತ್ ಶಿಕ್ಷಣ, ನಿವ್ವಳ ಆದಾಯ ಇತರೆ ಮಾಹಿತಿ
ಭಾರತದ ಅತಿದೊಡ್ಡ ಉದ್ಯಮಿಗಳ ಪಟ್ಟಿಯಲ್ಲಿರುವ ಜೀತ್ ಅದಾನಿ ಅವರು ಅದಾನಿ ಗ್ರೂಪ್ ಸಂಸ್ಥಾಪಕ ಗೌತಮ್ ಅದಾನಿ ಅವರ ಕಿರಿಯ ಪುತ್ರ. ತನ್ನ ಸಹೋದರ, ಅದಾನಿ ಗ್ರೂಪ್‌ನ ಸಿಇಒ ಕಿರಣ್ ಅದಾನಿ ಅವರಂತೆ ಜೀತ್ ಅದಾನಿ ಅವರು ಕೂಡ ಕಳೆದ ಕೆಲವು ವರ್ಷಗಳಿಂದ ಗಮನಾರ್ಹ ಸಾಧನೆ ಮಾಡಿದ್ದಾರೆ.
ಜೀತ್ ಅದಾನಿ ಅವರ ವೈಯಕ್ತಿಕ ಬದುಕು: ಜೀತ್ ಅದಾನಿ ಅವರು 1997ರಲ್ಲಿ ಗುಜರಾತ್‌ನ ಅಹಮದಾಬಾದ್‌ನಲ್ಲಿ ಜನಿಸಿದರು. ಅವರು ಉನ್ನತ ಅಧ್ಯಯನಕ್ಕಾಗಿ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯಕ್ಕೆ ತೆರಳಿದ್ದು, ಅಲ್ಲಿ ಸ್ಕೂಲ್ ಆಫ್ ಎಂಜಿನಿಯರಿಂಗ್ ಅಂಡ್ ಅಪ್ಲೈಡ್ ಸೈನ್ಸ್‌ನಲ್ಲಿ ಪದವಿ ಪಡೆದುಕೊಂಡಿದ್ದಾರೆ. ನಂತರ 2019ರಲ್ಲಿ ಅದಾನಿ ಗ್ರೂಪ್ ಸೇರಿದರು. ಅವರು ವಜ್ರದ ವ್ಯಾಪಾರಿ, ಸಿ. ದಿನೇಶ್ ಅಂಡ್ ಕೋ. ಪ್ರೈ.ಲಿ.ನ ಜೈಮಿನ್ ಶಾ ಅವರ ಪುತ್ರಿ ದಿವಾ ಜೈಮಿನ್ ಶಾ ಅವರನ್ನು ಮದುವೆಯಾಗಿದ್ದಾರೆ.
ಚಿಕ್ಕ ಹುಡುಗನಿರುವಾಗಲೇ ಜೀತ್ ಅದಾನಿ ಅವರು ಫೋಟೊಗ್ರಾಫಿ ಕಡೆಗೆ ಬಹಳ ಆಕರ್ಷಿತರಾಗಿದ್ದರು. ಅವರು ತಮ್ಮ ಬಿಡುವಿನ ವೇಳೆಯಲ್ಲಿ ಗಿಟಾರ್ ನುಡಿಸಲು ಹಾಗೂ ಸಂಗೀತ ಕೇಳಲು ಇಷ್ಟಪಡುತ್ತಾರೆ. ಜೀತ್ ತಮ್ಮ ಟ್ವಿಟರ್ ಖಾತೆಯಲ್ಲಿ ಉಲ್ಲೇಖಿಸಿರುವಂತೆ ಹೈ ಎಂಡ್ ವಾಹನಗಳನ್ನು ಡ್ರೈವಿಂಗ್ ಮಾಡುವಲ್ಲಿ ಹೆಚ್ಚು ಖುಷಿಪಡುತ್ತಾರೆ.
Karan Adani: ಅದಾನಿಯ ಹಿರಿಯ ಪುತ್ರ ಕರಣ್ ಶಿಕ್ಷಣ, ನಿವ್ವಳ ಆದಾಯ ಇತರೆ ಮಾಹಿತಿ
ಜೀತ್ ಅದಾನಿ ಅವರ ವೃತ್ತಿ ಬದುಕು, ಆಸ್ತಿ ಮೌಲ್ಯ
ಜೀತ್ ಅದಾನಿ ಅವರು ತಮ್ಮ ವೃತ್ತಿ ಜೀವನವನ್ನು ಗ್ರೂಫ್ ಸಿಎಫ್‌ಒ ಕಚೇರಿಯಲ್ಲಿ ಪ್ರಾರಂಭಿಸಿದರು. ಅಲ್ಲಿ ಅವರು ಸ್ಟ್ರಾಟೆಜಿ ಫೈನಾನ್ಸ್, ಕ್ಯಾಪಿಟಲ್ ಮಾರ್ಕೆಟ್ಸ್ ಹಾಗೂ ರಿಸ್ಕ್ ಅಂಡ್ ಗವರ್ನೆನ್ಸ್ ಪಾಲಿಸಿಯನ್ನು ನೋಡಿಕೊಳ್ಳುತ್ತಿದ್ದರು. ಈ ಹುದ್ದೆಯಲ್ಲಿ ಅದಾನಿ ಗ್ರೂಪ್ ಪಟ್ಟಿ ಮಾಡಿರುವ ಪ್ರತಿಯೊಂದು ವರ್ಟಿಕಲ್‌ಗಳೊಂದಿಗೆ ಸಂವಹನ ಅಗತ್ಯವಾಗಿದ್ದು, ಆ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಾರೆ. ಅದಾನಿ ಗ್ರೂಪ್‌ನ ಎಲ್ಲ ಗ್ರಾಹಕರಿಗಾಗಿ ಆಕರ್ಷಕವಾದ ಆಪ್‌ಗಳನ್ನು ಸಿದ್ಧಪಡಿಸುತ್ತಿರುವ ಅದಾನಿ ಏರ್‌ಪೋರ್ಟ್ಸ್ ಹಾಗೂ ಅದಾನಿ ಡಿಜಿಟಲ್ ಲ್ಯಾಬ್ಸ್‌ನ ಮೇಲುಸ್ತುವಾರಿಯನ್ನು ಕೂಡ ಜೀತ್ ಅವರು ನೋಡಿಕೊಳ್ಳುತ್ತಿದ್ದಾರೆ.
2018ರಲ್ಲಿ ಖರೀದಿಸಿದ ತಮಿಳುನಾಡಿನ ಕಟ್ಟುಪಲ್ಲಿ ಬಂದರಿನ ಜವಾಬ್ದಾರಿಯನ್ನು ಕೂಡ ನೋಡಿಕೊಳ್ಳುತ್ತಿದ್ದು, 2019ರಲ್ಲಿ ಅದಾನಿ ಗ್ರೂಪ್‌ನ ಫೈನಾನ್ಸ್ ಗ್ರೂಪ್‌ಗೆ ಉಪಾಧ್ಯಕ್ಷರಾದರು. ವರದಿಗಳ ಪ್ರಕಾರ, ಜೀತ್ ಅವರ ನಿವ್ವಳ ಆಸ್ತಿ ಮೌಲ್ಯವು ತಮ್ಮ ಹಿರಿಯ ಸಹೋದರನಷ್ಟೇ ಇದೆ. ಅಂದರೆ, $1.2 ಬಿಲಯನ್.
ಜೀತ್ ಅವರ ಪ್ರಾಥಮಿಕ ಆದಾಯದ ಮೂಲವು ಅದಾನಿ ಗ್ರೂಪ್ ಹಾಗೂ ಕಂಪೆನಿಗಳಿಂದ ಬರುತ್ತಿವೆ. ಜೀತ್ ಅದಾನಿ ಕೂಡ ಭಾರತದ ಅತ್ಯಂತ ಶ್ರೀಮಂತ ಉದ್ಯಮಿಗಳ ಪೈಕಿ ಒಬ್ಬರಾಗಿದ್ದಾರೆ.
ಜೀತ್ ಅವರು ಒಬ್ಬ ಸಕ್ರೀಯ ಸಮಾಜ ಸೇವಕರಾಗಿದ್ದು, ಹಲವಾರು ರಕ್ತದಾನ ಶಿಬಿರಗಳನ್ನು ಆಯೋಜಿಸಿದ್ದಾರೆ. ರಕ್ತದಾನ ನೀಡಲು ಮುಂದಾಗುವವರು ಹಾಗೂ ರಕ್ತದ ಅಗತ್ಯವಿರುವವರ ನಡುವೆ ಕೊಂಡಿಯಾಗಿ ಕೆಲಸ ಮಾಡುವ ಮೂಲಕ ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡುತ್ತಿದ್ದಾರೆ.
ಜನಸಾಮಾನ್ಯರ ಒಳಿತಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿರುವ ಜೀತ್ ಅವರ ನಿಸ್ವಾರ್ಥ ಸೇವೆ, ಕೊಡುಗೆಗಳನ್ನು ಗುರುತಿಸುವುದು ಗಮನಾರ್ಹ. ಆ ಮೂಲಕ ದೊಡ್ಡ ಉದ್ಯಮವನ್ನು ಮುನ್ನಡೆಸುವ ಜತೆಗೆ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿರುವುದು ಜೀತ್ ಅವರ ಸೇವಾ ಮನೋಭಾವಕ್ಕೆ ಉತ್ತಮ ನಿದರ್ಶನವಾಗಿದೆ.