ಪಾಕಿಸ್ತಾನದಲ್ಲಿ ಆಹಾರ ಬಿಕ್ಕಟ್ಟು ; ಉಚಿತ ಹಿಟ್ಟು ವಿತರಣೆ ವೇಳೆ ಕಾಲ್ತುಳಿತ, ಇದುವರೆಗೆ 11 ಮಂದಿ ಸಾವು
ಪಾಕಿಸ್ತಾನ : ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸರ್ಕಾರಿ ವಿತರಣಾ ಕೇಂದ್ರಗಳಿಂದ ಉಚಿತ ಹಿಟ್ಟು ವಿತರಿಸುತ್ತಿದ್ದ ವೇಳೆ ಕಾಲ್ತುಳಿತ ಸಂಭವಿಸಿದ್ದು, ಕಳೆದ ಕೆಲವು ದಿನಗಳಲ್ಲಿ ಕನಿಷ್ಠ 11 ಜನರು ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ನಾಲ್ಕು ಜಿಲ್ಲೆಗಳಾದ ಸಾಹಿವಾಲ್, ಬಹವಾಲ್‌ಪುರ್, ಮುಜಾಫರ್‌ಗಢ್ ಮತ್ತು ಒಕಾರಾದಲ್ಲಿನ ಉಚಿತ ಹಿಟ್ಟಿನ ಕೇಂದ್ರಗಳಲ್ಲಿ ಕಾಲ್ತುಳಿತದಲ್ಲಿ ಇಬ್ಬರು ವೃದ್ಧ ಮಹಿಳೆಯರು ಮತ್ತು ಒಬ್ಬ ಪುರುಷ ಮಂಗಳವಾರ ಸಾವನ್ನಪ್ಪಿದ್ದರೆ, ಇತರ 60 ಮಂದಿ ಗಾಯಗೊಂಡಿದ್ದಾರೆ. ಇತ್ತ ಫಸೈಲಾಬಾದ್, ಜೆಹಾನಿಯನ್ ಮತ್ತು ಮುಲ್ತಾನ್ ಸಹ ಕಾಲ್ತುಳಿತದಿಂದ ಸಾವುಗಳನ್ನು ವರದಿ ಮಾಡಿದೆ.
ಹಣದ ಕೊರತೆಯಿರುವ ಸರ್ಕಾರವು ಬಡವರಿಗೆ ವಿಶೇಷವಾಗಿ ಪಂಜಾಬ್ ಪ್ರಾಂತ್ಯದಲ್ಲಿ ಉಚಿತ ಹಿಟ್ಟಿನ ಯೋಜನೆಯನ್ನು ಪರಿಚಯಿಸಿದೆ. ಈ ಸಂಬಂಧ ಹಲವರು ಸರ್ಕಾರಿ ವಿತರಣಾ ಕೇಂದ್ರಗಳಿಗೆ ಜಮಾಹಿಸಿದ್ದರು. ಪರಿಣಾಮ ಘಟನೆಗಳು ಸಂಭವಿಸಿವೆ ಎಂದು ತಿಳಿದು ಬಂದಿದೆ.
ಜನಸಂದಣಿ ಮತ್ತು ಜನರಿಗೆ ಅನಾನುಕೂಲತೆಯನ್ನು ಕಡಿಮೆ ಮಾಡಲು ಉಚಿತ ಹಿಟ್ಟಿನ ಕೇಂದ್ರಗಳನ್ನು ತೆರೆಯುವುದಾಗಿ ಪಂಜಾಬ್ ಉಸ್ತುವಾರಿ ಮುಖ್ಯಮಂತ್ರಿ ಮೊಹ್ಸಿನ್ ನಖ್ವಿ ಘೋಷಿಸಿದ್ದರು.
ಮುಖ್ಯಮಂತ್ರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪ್ರಾಂತೀಯ ಸಚಿವರು ಮತ್ತು ಕಾರ್ಯದರ್ಶಿಗಳು ಮುಂದಿನ ಮೂರು ದಿನಗಳ ಕಾಲ ನಿಯೋಜಿತ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸಿ, ಹಿಟ್ಟು ಕೇಂದ್ರಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಲು ನಿರ್ಧರಿಸಲಾಗಿದೆ.
ಇತ್ತ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಪಾಕಿಸ್ತಾನ ಉಚಿತ ಹಿಟ್ಟಿನ ಕೇಂದ್ರಗಳಲ್ಲಿ ನವಾಜ್ ಸರ್ಕಾರ ನಡೆಸುತ್ತಿರುವ ದುರುಪಯೋಗಕಕ್ಕೆ ಮೂಲ ಕಾರಣ. ಜನರ ಸಾವಿಗೆ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಪಂಜಾಬ್ ಉಸ್ತುವಾರಿ ಮುಖ್ಯಮಂತ್ರಿ ನಖ್ವಿ ಹೊಣೆಗಾರರಾಗಿದ್ದಾರೆ ಎಂದು ಟೀಕಿಸಿದ್ದಾರೆ.