ಸರ್ಕಾರಿ ಕಚೇರಿ, ಸಾರ್ವಜನಿಕ ಸ್ಥಳಗಳಲ್ಲಿ ಜನಪ್ರತಿನಿಧಿ ಹೆಸರು, ಭಾವಚಿತ್ರ ತೆಗೆಯಿರಿ - BBMP ಮುಖ್ಯ ಆಯ್ತುರ ಸೂಚನೆ

ಸರ್ಕಾರಿ ಕಚೇರಿ, ಸಾರ್ವಜನಿಕ ಸ್ಥಳಗಳಲ್ಲಿ ಜನಪ್ರತಿನಿಧಿ ಹೆಸರು, ಭಾವಚಿತ್ರ ತೆಗೆಯಿರಿ - BBMP ಮುಖ್ಯ ಆಯ್ತುರ ಸೂಚನೆ

ಬೆಂಗಳೂರು: ಸಾರ್ವತ್ರಿಕ ವಿಧಾನಸಭೆ ಚುನಾವಣೆ ( Karnataka Assembly Election 2023 ) ನೀತಿ ಸಂಹಿತೆ ಜಾರಿಯಾಗಿದ್ದು, ಸರ್ಕಾರಿ ಕಛೇರಿ, ಸರ್ಕಾರಿ ಆಸ್ತಿಗಳು ಸೇರಿದಂತೆ ಇನ್ನಿತರೆ ಸಾರ್ವಜನಿಕ ಸ್ಥಳಗಳಲ್ಲಿ ಜನಪ್ರತಿನಿಧಿಗಳ ಹೆಸರು ಹಾಗೂ ಭಾವಚಿತ್ರಗಳನ್ನು ತೆಗೆಯಲು ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆ ವಲಯ ಜಂಟಿ ಆಯುಕ್ತರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಜೊತೆ ನಡೆಸಿದ ವರ್ಚುವಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರಿ ಕಛೇರಿ, ಸರ್ಕಾರಿ ಆಸ್ತಿಗಳು ಸೇರಿದಂತೆ ಇನ್ನಿತರೆ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಫ್ಲೆಕ್ಸ್, ಪೋಸ್ಟರ್, ಬ್ಯಾನರ್, ಬಿತ್ತಿಪತ್ರಗಳು, ಗೋಡೆ ಬರಹಗಳು ಇರುವಂತಿಲ್ಲ. ಯಾರಾದರು ಪೋಸ್ಟರ್, ಬ್ಯಾನರ್ ಹಾಕಿದರೆ ಸಂಬಂಧಪಟ್ಟವರಿಗೆ ಕೇಸ್ ಬುಕ್ ಮಾಡಿ ಎಂದು ಸೂಚನೆ ನೀಡಿದರು.

ಪಾಲಿಕೆಯ ಆಯಾ ವಲಯ ವ್ಯಾಪ್ತಿಯಲ್ಲಿ ಯಾವುದಾದರು ಕಾರ್ಯಕ್ರಮ ಆಯೋಜಿಸಿದ್ದಲ್ಲಿ ತತ್‌ಕ್ಷಣ ಅದನ್ನು ರದ್ದುಪಡಿಸಬೇಕು. ಚುನಾವಣೆ ಮುಗಿಯುವವರೆಗೆ ಯಾವುದೇ ಕಾರ್ಯಕ್ರಮ ಆಯೋಜಿಸುವಂತಿಲ್ಲ. ಶುದ್ಧ ಕುಡಿಯುವ ನೀರಿನ ಘಟಕ, ಉದ್ಯಾನವನ ಸೇರಿದಂತೆ ಇನ್ನಿತರೆ ಸ್ಥಳಗಳಲ್ಲಿ ಅಳವಡಿಸಿರುವ ನಾಮಫಲಕಗಳಲ್ಲಿ ಜನಪ್ರತಿನಿಧಿಗಳ ಹೆಸರು, ಭಾವಚಿತ್ರಗಳು ಇರುವಂತಿಲ್ಲ. ಇದ್ದರೆ ಕೂಡಲೆ ಅದನ್ನು ತೆಗೆಯುವುದು ಅಥವಾ ಬಟ್ಟೆಯ ಮೂಲಕ ಕಾಣದಂತೆ ಮುಚ್ಚಬೇಕೆಂದು ಸೂಚನೆ ನೀಡಿದರು. ರಸ್ತೆ ಬದಿಯಿರುವ ನಾಮಫಲಕಗಳಲ್ಲಿರುವ ಜನಪ್ರತಿನಿಧಿಗಳ ಹೆಸರುಗಳನ್ನು ತೆಗೆಯಬೇಕು. ಎಲ್ಲೂ ಜನಪ್ರತಿನಿಧಿಗಳ ಹೆಸರಾಗಲಿ, ಸಂಪರ್ಕ ಸಂಖ್ಯೆಯಾಗಲಿ ಇರುವಂತಿಲ್ಲ ಎಂದು ತಿಳಿಸಿದರು.

ಪ್ರಗತಿಯಲ್ಲಿ ಕಾಮಗಾರಿಗಳ ಪಟ್ಟಿಕೊಡಿ

ಬಿಬಿಎಂಪಿ ವ್ಯಾಪ್ತಿಯ ಎಲ್ಲಾ 8 ವಲಯಗಳ ವ್ಯಾಪ್ತಿಯಲ್ಲಿ ಯೋಜನಾ ವಿಭಾಗ, ಕೆರೆಗಳ ವಿಭಾಗ, ರಾಜಕಾಲುವೆ ವಿಭಾಗ ಸೇರಿದಂತೆ ಇನ್ನಿತರೆ ವಿಭಾಗಗಳಿಗೆ ಸಂಬಂಧಿಸಿದಂತೆ ಪ್ರಗತಿಯಲ್ಲಿರುವ ಕಾಮಗಾರಿಗಳ ಪಟ್ಟಿಯನ್ನು ಕೂಡಲೆ ಕೊಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈಗಾಗಲೇ ಕಾರ್ಯಾದೇಶ ನೀಡಿ ಕೆಲಸ ಪ್ರಾರಂಭಿಸಿ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಹೊರತುಪಡಿಸಿ ಬೇರೆ ಯಾವುದೇ ಹೊಸ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬಾರದು. ಹೊಸದಾಗಿ ಟೆಂಡರ್ ಕರೆಯುವುದಾಗಲಿ, ಹೊಸದಾಗಿ ಕಾರ್ಯಾದೇಶ ನೀಡುವುದಾಗಲಿ ಮಾಡುವಂತಿಲ್ಲ. ಚುನಾವಣಾ ನೀತಿ ಸಂಹಿತೆ ನಿಯಮ ಉಲ್ಲಂಘಿಸುವುದು ಕಂಡಬಂದರೆ ಚುನಾವಣಾ ಆಯೋಗದಿಂದ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಸಭೆಯಲ್ಲಿ ವಿಶೇಷ ಆಯುಕ್ತರಾದ, ಉಜ್ವಲ್ ಕುಮಾರ್ ಘೋಷ್, ಜಯರಾಮ ರಾಯಪುರ, ಎಲ್ಲಾ ಜಂಟಿ ಆಯುಕ್ತರು, ಮುಖ್ಯ ಅಭಿಯಂತರರು, ಕಾರ್ಯಫಾಲಕ ಅಭಿಯಂತರರು ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.