ಭೂಕಂಪದಿಂದ ಟರ್ಕಿ 6 ಮೀಟರ್‌ನಷ್ಟು ಸ್ಥಳಾಂತರ : ವರದಿ

ಅಂಕಾರ, ಫೆ.9: ಸೋಮವಾರ ಮುಂಜಾನೆ ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪದಿಂದ ಟರ್ಕಿ ಸುಮಾರು 6 ಮೀಟರ್‌ನಷ್ಟು ಸ್ಥಳಾಂತರಗೊಂಡಿರಬಹುದು ಎಂದು ಇಟಲಿಯ ಭೂಕಂಪಶಾಸ್ತ್ರಜ್ಞರು ಪ್ರತಿಪಾದಿಸಿದ್ದಾರೆ. ಭಾರೀ ಭೂಕಂಪವು ಟರ್ಕಿಯ ಭೂಪ್ರದೇಶದ ಅಡಿ ಇರುವ ಟೆಕ್ನೋಟಿಕ್‌ಪ್ಲೇಟ್‌ಗಳು (ಭೂಮಿಯ ಹೊರಪದರ ಮತ್ತು ಮೇಲ್ಭಾಗದ ಕವಚದ ದೈತ್ಯಾಕಾರದ ತುಣುಕು) ಸುಮಾರು 10 ಅಡಿಗಳಷ್ಟು ಚಲಿಸಿವೆ ಎಂದು ಆರಂಭದಲ್ಲಿ ಅಂದಾಜಿಸಲಾಗಿತ್ತು.
ಸೋಮವಾರ ಟರ್ಕಿ ಮತ್ತು ಸಿರಿಯಾದಲ್ಲಿ 5 ಭೂಕಂಪ ಹಾಗೂ 100ಕ್ಕೂ ಅಧಿಕ ಪಶ್ಚಾತ್‌ಕಂಪನಗಳು ಸಂಭವಿಸಿದ್ದರಿಂದ 16 ಸಾವಿರಕ್ಕೂ ಅಧಿಕ ಜನರು ಮೃತಪಟ್ಟಿದ್ದು 11000ಕ್ಕೂ ಅಧಿಕ ಕಟ್ಟಡಗಳು ನೆಲಸಮಗೊಂಡಿವೆ. ನಿರಂತರವಾಗಿ ಘರ್ಷಣೆಗೊಳ್ಳುವ 4 ಪ್ಲೇಟ್‌ಗಳ (ಅನಾಟೊಲಿಯನ್, ಅರೇಬಿಕಾ, ಯುರೇಶ್ಯನ್ ಮತ್ತು ಆಫ್ರಿಕನ್ ಪ್ಲೇಟ್) ಛೇದಕದಲ್ಲಿ ಏಕಭೂಕಂಪದ ಅನುಕ್ರಮದ ಭಾಗವಾಗಿ ಸರಣಿ ಭೂಕಂಪ ಸಂಭವಿಸಿದೆ. ಬೃಹತ್ ಸೀಳುವಿಕೆ(ಛೇದಕ) 190 ಕಿ.ಮೀ ಉದ್ದ ಮತ್ತು 25 ಕಿ.ಮೀ ಅಗಲದ ಪ್ರದೇಶವನ್ನು ಒಳಗೊಂಡಿತ್ತು. ಇದು ಸಶಕ್ತವಾಗಿ ನೆಲವನ್ನು ನಡುಗಿಸಿದೆ ಮತ್ತು 9 ಗಂಟೆಯ ಅಂತರದಲ್ಲಿ ಎರಡು ಕಡೆ(ಟರ್ಕಿ ಮತ್ತು ಸಿರಿಯಾ) ರಭಸದಿಂದ ಮೇಲಕ್ಕೆ ಚಿಮ್ಮಿದೆ ಎಂದವರು ಹೇಳಿದ್ದಾರೆ. ಭೂಕಂಪದ ತೀವ್ರತೆಯ ಕುರಿತು ಉಲ್ಲೇಖಿಸಿದ ಅವರು, ಸುದೀರ್ಘವಾದ ಭೂಕಂಪವು, ಹಿಂದೆ ಕೆಲವು ಬಾರಿ ಸಂಭವಿಸಿದಂತೆ, ಹಲವು ದಿನ, ತಿಂಗಳವರೆಗೂ ಮುಂದುವರಿಯಬಹುದು ಎಂದರು.