ಬಿಜೆಪಿ ಸೇರಲು ಸಕಲ ಸಿದ್ಧತೆ ಮಾಡಿಕೊಂಡ ಮಾಜಿ ಸಚಿವ ರೋಷನ್ ಬೇಗ್

ಬೆಂಗಳೂರು, ಮಾರ್ಚ್. 21: ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈಗಾಗಲೇ ರಾಜ್ಯದಲ್ಲಿ ಪಕ್ಷಾಂತರ ಪರ್ವ ಆರಂಬವಾಗಿದೆ. ಇದರ ಬೆನ್ನಲ್ಲೇ ಮಾಜಿ ಸಚಿವ ಹಾಗೂ ಏಳು ಬಾರಿ ಶಾಸಕರಾಗಿರುವ ಆರ್ ರೋಷನ್ ಬೇಗ್ ಅವರು ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ ಸೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತಮ್ಮ ಬೆಂಬಲಿಗರ ಜೊತೆ ಬಿಜೆಪಿ ಸೇರಲು ತೀರ್ಮಾನಿಸಿರುವ ರೋಷನ್ ಬೇಗ್ ಮುಂದಿನ ವಾರ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಯಾವಾಗ ಬೇಗಾದರೂ ಅವರು ಪಕ್ಷಕ್ಕೆ ಸೇರ್ಪಡೆಯಾಗಬಹದು ಎಂದು ಮೂಲಗಳು ತಿಳಿಸಿವೆ. ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಮಾಜಿ ಸಚಿವ ರೋಷನ್ ಬೇಗ್ ಶಿವಾಜಿನಗರದಿಂದ ಸ್ಪರ್ಧಿಸಬಹುದು.
ಐಎಂಎ ಬಹುಕೋಟಿ ವಂಚನೆ ಪ್ರಕರಣದ ಆರೋಪಿಯಾಗಿದ್ದ ರೋಷನ್ ಬೇಗ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ವರಿಷ್ಠರು ಕೂಡ ಸಮ್ಮತಿಸಿದ್ದು, ಅವಕಾಶ ನೀಡಿದರೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ತಿಳಿಸಿದ್ದಾರೆ. ಬಿಜೆಪಿಗೆ ಶಿವಾಜಿನಗರದಲ್ಲಿ ಪ್ರಬಲವಾದ ಅಭ್ಯರ್ಥಿಗಳ ಕೊರತೆ ಇರುವುದರಿಂದ ರೋಷನ್ ಬೇಗ್ ಅವರನ್ನು ಸೇರ್ಪಡೆ ಮಾಡಿಕೊಳ್ಳಲು ಬಿಜೆಪಿ ತೀರ್ಮಾನಿಸಿದೆ.
ಕೆಲವರ ಪ್ರಕಾರ ರೋಷನ್ ಬೇಗ್ ಅವರಿಗೆ ತಮ್ಮ ಕ್ಷೇತ್ರದಲ್ಲಿ 15 ವರ್ಷಗಳಿಂದ ಸಹಾಯ ಮಾಡುತ್ತಿರುವ ತಮ್ಮ ಪುತ್ರ ರುಮಾನ್ ಬೇಗ್ ಅವರನ್ನು ಶಿವಾಜಿನಗರದಿಂದ ಕಣಕ್ಕಿಳಿಸಲು ಉತ್ಸಾಹವಿದೆ ಎಂದು ಮೂಲಗಳು ತಿಳಿಸಿವೆ. ಪ್ರಸ್ತುತ ರೋಷನ್ ಬೇಗ್ ವಿರುದ್ಧದ ಆರೋಪಗಳನ್ನು ತೆರವುಗೊಳಿಸಲಾಗಿದೆ. ಬಿಜೆಪಿಯಲ್ಲಿ ಹೊಸ ಆರಂಭವನ್ನು ಮಾಡಲು ಅವರು ಪ್ರಯತ್ನಿಸುತ್ತಿದ್ದಾರೆ ಎಂದು ಬೆಂಬಲಿಗರು ಹೇಳಿದ್ದಾರೆ.
ಜಮಾತ್ ಉಲೇಮಾ - ಎ - ಹಿಂದ್ ಅಧ್ಯಕ್ಷ ಮೌಲಾನಾ ಸುಹೈಬ್ ಖಾಸ್ಮ್ ಅವರು ಕರೆದ ಬಿಜೆಪಿಯ "ಸೂಫಿ ಸಂವಾದ್" ಗೆ ಮಾಜಿ ಸಚಿವ ರೋಷನ್ ಬೇಗ್ ಸಾಹೇಬ್ ಅವರನ್ನು ಅಧಿಕೃತವಾಗಿ ಆಹ್ವಾನಿಸಲಾಗಿದೆ ಎಂಬುದು ಈ ಊಹಾಪೋಹಕ್ಕೆ ಕಾರಣವಾಗಿದೆ. ಆಹ್ವಾನಿತರಲ್ಲಿ ಸಿಖ್ ಮತ್ತು ಕ್ರಿಶ್ಚಿಯನ್ ಸಮುದಾಯಗಳ ನಾಯಕರೂ ಸೇರಿದ್ದಾರೆ.
ದೆಹಲಿಯಲ್ಲಿ ನಡೆದ ಸೂಫಿ ಸಂವಾದ್ ಸಮಾವೇಶದಲ್ಲಿ ಮಾಜಿ ಸಚಿವ ರೋಷನ್ ಬೇಗ್ ಭಾಗವಹಿಸಿದ್ದರು. ಸಮಾವೇಶಕ್ಕೆ ಎಲ್ಲಾ ಆಹ್ವಾನಿತರು ಕೇಸರಿ ಶಾಲನ್ನು ಧರಿಸದಿದ್ದರೂ, ರೋಷನ್ ಬೇಗ್ ಮಾತ್ರ ಅದನ್ನು ಧರಿಸಿದ್ದರು. ಇದರಿಂದಾಗಿ ಮಾಜಿ ಸಚಿವರು ಬಿಜೆಪಿಗೆ ಸೇರುತ್ತಾರೆ ಎಂಬ ವದಂರಿಗಳಿಗೆ ಮತ್ತಷ್ಟು ರೆಕ್ಕೆಪುಕ್ಕ ಬಂದಿವೆ. ಇನ್ನು, ಹೊಸ ರಾಜಕೀಯ ಜೀವನ ಆರಂಬಿಸಲು ಅವರು ಅವಕಾಶ ನೋಡುತ್ತಿದ್ದಾರೆ ಎನ್ನಲಾಗಿದೆ.
ಮಾಜಿ ಸಚಿವ ರೋಷನ್ ಬೇಗ್ ಕರ್ನಾಟಕ ವಿಧಾನಸಭೆಯಲ್ಲಿ ಏಳು ಬಾರಿ ಸದಸ್ಯರಾಗಿದ್ದಾರೆ ಜತೆಗೆ ಅವರು ಅಲ್-ಅಮೀನ್ ಎಜುಕೇಷನಲ್ ಸೊಸೈಟಿಯ ಉಪಾಧ್ಯಕ್ಷರೂ ಆಗಿದ್ದಾರೆ. 1984 ರಿಂದ 1994 ರವರೆಗೆ ಅವರು ಶಾಸಕರಾಗಿ ಮೊದಲ ಎರಡು ಅವಧಿಗೆ ಜನತಾ ಪಕ್ಷದ ಸದಸ್ಯರಾಗಿದ್ದರು. 1994 ರಿಂದ 2019 ರವರೆಗೆ ಅವರು ಕಾಂಗ್ರೆಸ್‌ನಿಂದ 5 ಬಾರಿಗೆ ಶಾಸಕ ಸ್ಥಾನವನ್ನು ಪಡೆದಿದ್ದಾರೆ.
2019 ರ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಕಳಪೆ ಪ್ರದರ್ಶನಕ್ಕಾಗಿ ಕಾಂಗ್ರೆಸ್ ಉನ್ನತ ನಾಯಕರನ್ನು ಅವಮಾನಿಸಿದ ನಂತರ ರೋಷನ್ ಬೇಗ್ ಅವರನ್ನು 2019 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಅಮಾನತುಗೊಳಿಸಲಾಯಿತು. ರೋಷನ್ ಬೇಗ್ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಹಂಕಾರ ಮತ್ತು ದಿನೇಶ್ ಗುಂಡೂ ರಾವ್ ಅವರ ಅಪ್ರಬುದ್ತೆ ಚುನಾವಣಾ ಸೋಲಿಗೆ ಕಾರಣ ಎಂದು ಆರೋಪಿಸಿದ್ದರು. ಬಳಿಕ ಪ್ರಧಾನಿ ನರೇಂದ್ರ ಮೋದಿಯವರ ಯೋಜನೆಗಳನ್ನು ಹೊಗಳಿದ್ದರು.
ರೋಷನ್ ಬೇಗ್ ಶಿವಾಜಿನಗರ ವಿಧಾನಸಭಾ ಕ್ಷೇತ್ರದಿಂದ ದಾಖಲೆಯ ಏಳು ಬಾರಿ ವಿಧಾನಸಭೆಗೆ ಚುನಾಯಿತರಾಗಿದ್ದರು. ಶಿವಾಜಿನಗರವು 4 ದಶಕಗಳಿಂದ ಅವರ ಭದ್ರಕೋಟೆ ಎಂದು ಹೇಳಲಾಗುತ್ತಿತ್ತು. ಬೆಂಗಳೂರು ಸೆಂಟ್ರಲ್ ಮತ್ತು ಬೆಂಗಳೂರು ಉತ್ತರದಲ್ಲಿ ಮುಸ್ಲಿಂ ಸಮುದಾಯದ ಪ್ರಮುಖ ನಾಯಕ ಎಂದು ಬಿಂಬಿಸಲಾಗಿದೆ. ಸಾಕಷ್ಟು ಹಿಂದೂ ಜನಸಂಖ್ಯೆಯನ್ನು ಹೊಂದಿರುವ ಮುಸ್ಲಿಂ ಬಹುಸಂಖ್ಯಾತ ಕ್ಷೇತ್ರವಾದ ಶಿವಾಜಿನಗರದಿಂದ ಶಾಸಕರಾಗಿದ್ದರು.