ಹುಬ್ಬಳ್ಳಿ: ನೃಪತುಂಗ ಬೆಟ್ಟದಲ್ಲಿ ಚಿರತೆ ಕಾಣಿಸಿಕೊಂಡ ಶಂಕೆ, ಪ್ರವೇಶ ಬಂದ್

ಹುಬ್ಬಳ್ಳಿಯ ನೃಪತುಂಗ ಬೆಟ್ಟಕ್ಕೆ ತೆರಳುವ ದಾರಿಯನ್ನು ಬಂದ್ ಮಾಡಿರುವುದು

ಹುಬ್ಬಳ್ಳಿ: ನಗರದ ಪ್ರಮುಖ ವಾಯುವಿಹಾರ ತಾಣವಾದ  ನೃಪತುಂಗ ಬೆಟ್ಟದಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಅರಣ್ಯ ‌ಇಲಾಖೆ ಸಿಬ್ಬಂದಿ ಸಾರ್ವಜನಿಕರಿಗೆ ಬೆಟ್ಟದ ಪ್ರವೇಶ ತಾತ್ಕಾಲಿಕವಾಗಿ ನಿಷೇಧಿಸಿದ್ದಾರೆ.
ಬೆಟ್ಟ ಹಾಗೂ ಅದರ ಸುತ್ತಲಿನ ಪ್ರದೇಶದಲ್ಲಿ ಬುಧವಾರ ರಾತ್ರಿ ಚಿರತೆ ಓಡಾಡಿದೆ ಎಂದು ಸ್ಥಳೀಯರು ಮಾಹಿತಿ‌ ನೀಡಿದ್ದರು. ಇದರಿಂದ ಜನ ಆತಂಕಕ್ಕೆ ಒಳಗಾಗಿದ್ದಾರೆ.
ವಲಯ ಅರಣ್ಯ ಅಧಿಕಾರಿ ಎಸ್.ಎಂ ತೆಗ್ಗಿನಮನಿ ಈ ಕುರಿತು ಪ್ರತಿಕ್ರಿಯಿಸಿ ಚಿರತೆ ಕಾಣಿಸಿಕೊಂಡಿದೆ ಎಂದು ಜನರಿಂದ ಗೊತ್ತಾಗಿದೆ. ಜನವಸತಿ ಪ್ರದೇಶವನ್ನು ದಾಟಿ ನೃಪತುಂಗ ಬೆಟ್ಟಕ್ಕೆ ಬಂದಿದೆ ಎನ್ನುವುದೇ ಅಚ್ಚರಿ. ಈ ಕುರಿತು ಜನಜಾಗೃತಿ ಮೂಡಿಸಲಾಗಿದೆ ಎಂದರು.
ಚಿರತೆ ಹೆಜ್ಜೆಗುರುತು ಪತ್ತೆ ಹಚ್ಚಲು ನಮ್ಮ ಇಲಾಖೆ ಸಿಬ್ಬಂದಿ ಕಾರ್ಯ ಪ್ರವೃತ್ತರಾಗಿದ್ದಾರೆ.  ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು ಎಂದರು.
ಕಳೆದ ವಾರ ಹುಬ್ಬಳ್ಳಿ ಹೊರವಲಯದ ಅಂಚಟಗೇರಿಯಲ್ಲಿ ಚಿರತೆ ಕಂಡಿತ್ತು. ಅದು ಈಗ ಇಲ್ಲಿಗೆ ಬಂದಿರಲೂಬಹುದು ಎಂದು ಅವರು ಅನುಮಾನ ವ್ಯಕ್ತಪಡಿಸಿದರು.