ರಷ್ಯಾ ಅಧ್ಯಕ್ಷರನ್ನು ಭೇಟಿಯಾದ ದೋವಲ್

ನವದೆಹಲಿ: ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್,ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾಗಿದ್ದಾರೆ.
ಭಾರತ ಹಾಗೂ ರಷ್ಯಾ ನಡುವಿನ ಕಾರ್ಯತಂತ್ರ ಪಾಲುದಾರಿಕೆ ಮತ್ತು ಉಭಯ ರಾಷ್ಟ್ರಗಳ ಸಂಬಂಧವನ್ನು ಮತ್ತಷ್ಟು ಉತ್ತಮಗೊಳಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಿದ್ದಾರೆ ಎಂದು ರಷ್ಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಮಾಹಿತಿ ನೀಡಿದೆ.
ಅಫ್ಘಾನಿಸ್ತಾನದ ಭದ್ರತಾ ಕಾಳಜಿಗಳ ಕುರಿತು ರಷ್ಯಾ ಆಯೋಜಿಸಿದ್ದ ಭದ್ರತಾ ಮಂಡಳಿಯ ಕಾರ್ಯದರ್ಶಿಗಳು ಹಾಗೂ ಭದ್ರತಾ ಸಲಹೆಗಾರರ ಸಭೆಯಲ್ಲಿ ದೋವಲ್ ಪಾಲ್ಗೊಂಡಿದ್ದರು.
ಈ ವೇಳೆ ಯಾವುದೇ ದೇಶಗಳು ಭಯೋತ್ಪಾದನೆಯ ಉದ್ದೇಶಕ್ಕಾಗಿ ಆಫ್ಘನ್ ನೆಲವನ್ನು ಬಳಸುವಂತಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಅಫ್ಘಾನ್ ಜನತೆಗೆ ಅಗತ್ಯವಿದ್ದಾಗ ಭಾರತ ಎಂದಿಗೂ ಅವರ ಕೈ ಬಿಡುವುದಿಲ್ಲ ಎಂದರು.
ಇದೇ ವೇಳೆ ವ್ಲಾಡಿಮಿರ್ ಅವರ ಜತೆಗೆ ಮಾತುಕತೆ ನಡೆಸಿ, ಪ್ರಾದೇಶಿಕ ಸಮಸ್ಯೆಗಳು ಸೇರಿದಂತೆ ವಿವಿಧ ವಿಚಾರಗಳನ್ನು ದೋವಲ್ ಚರ್ಚಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.