'83' ಚಿತ್ರದ ನಿರ್ಮಾಪಕರ ವಿರುದ್ಧ ಕೇಸ್​! ನಟಿ ದೀಪಿಕಾ ಪಡುಕೋಣೆಗೂ ಎದುರಾಯ್ತು ಸಂಕಷ್ಟ

'83' ಚಿತ್ರದ ನಿರ್ಮಾಪಕರ ವಿರುದ್ಧ ಕೇಸ್​! ನಟಿ ದೀಪಿಕಾ ಪಡುಕೋಣೆಗೂ ಎದುರಾಯ್ತು ಸಂಕಷ್ಟ

ಮುಂಬೈ: ಕ್ರಿಕೆಟ್​ ಮತ್ತು ದೇಶಪ್ರೇಮ ಎರಡನ್ನೂ ಮೇಳೈಸಿರುವ ರಣವೀರ್​ ಸಿಂಗ್​​ರ ಹೊಸ ಚಿತ್ರ '83' ಬಿಡುಗಡೆಗೆ ಸಿದ್ಧವಾಗುತ್ತಿದ್ದು, ಅದರ ಟ್ರೈಲರ್​ ಅಭಿಮಾನಿಗಳ ಮನ ಗೆದ್ದಿದೆ. ಇದೀಗ ಈ ಚಿತ್ರ ಮತ್ತೊಂದು ರೀತಿಯಲ್ಲಿ ಸುದ್ದಿ ಮಾಡುತ್ತಿದೆ.

ಅದೆಂದರೆ ಯುಎಇ ಮೂಲದ ಫೈನಾನ್ಸರ್​ ಒಬ್ಬರು 83 ಚಿತ್ರ ನಿರ್ಮಾಪಕರ ವಿರುದ್ಧ ವಂಚನೆಯ ಆರೋಪ ಮಾಡಿರುವುದು.

ಮುಂಬೈನ ಅಂಧೇರಿ ಮೆಟ್ರೊಪೊಲಿಟನ್ ಮ್ಯಾಜಿಸ್ಟ್ರೇಟ್​ ಕೋರ್ಟಿನಲ್ಲಿ 83ರ ಎಲ್ಲಾ ನಿರ್ಮಾಪಕರ ವಿರುದ್ಧ ಫ್ಯೂಚರ್​ ರಿಸೋರ್ಸ್​​ನ ಕಂಪೆನಿಯ ಮಾಲಿಕರು ವಂಚನೆ ಮತ್ತು ಅಪರಾಧಿಕ ಸಂಚಿನ ದೂರು ದಾಖಲಿಸಿದ್ದಾರೆ. ತಮ್ಮ ಕಂಪೆನಿ 83 ಚಿತ್ರದ ನಿರ್ಮಾಣ ಸಂಸ್ಥೆ ವಿಬ್ರಿ ಮೀಡಿಯಾದಿಂದ ಉತ್ತಮ ರಿಟರ್ನ್ಸ್​​ನ ವಾಯ್ದೆಯ ಮೇರೆಗೆ ಚಿತ್ರದಲ್ಲಿ 15.60 ಕೋಟಿ ರೂ.ಗಳನ್ನು ಹೂಡಿದೆ. ಆದರೆ ಈವರೆಗೆ ತಮಗೆ ಹೇಳಿದಂತೆ ಯಾವುದೇ ಮೊತ್ತ ನೀಡಿಲ್ಲ. ಚಿತ್ರ ನಿರ್ಮಾಣದ ಕಾರ್ಯವನ್ನು ವಿಳಂಬ ಮಾಡಿ, ಬೇರೆ ಬೇರೆ ಕಂಪೆನಿಗಳೊಂದಿಗೆ ಫೈನಾನ್ಸರ್​​ನ ಅನುಮತಿ ಇಲ್ಲದೆ ಒಪ್ಪಂದ ಮಾಡಿ ಹೆಚ್ಚಿನ ಪ್ರಮಾಣದಲ್ಲಿ ಹಣ ವಿನಿಯೋಗಿಸಲಾಗಿದೆ ಎಂದು ಆರೋಪಿಸಿರುವುದಾಗಿ ದೂರುದಾತ ಫೈನಾನ್ಸರ್​ನ ವಕೀಲ ರಿಜ್ವಾನ್ ಸಿದ್ದಿಖಿ ಹೇಳಿದ್ದಾರೆ. ಚಿತ್ರದ ನಿರ್ಮಾಪಕರಾದ ಕಬೀರ್​ ಖಾನ್​, ಸಾಜಿದ್​ ನಾಡಿಡ್​ವಾಲ, ನಟಿ ದೀಪಿಕಾ ಪಡುಕೋಣೆ ಹಾಗೂ ಇನ್ನಿಬ್ಬರನ್ನು ಈ ಪ್ರಕರಣದಲ್ಲಿ ಹೆಸರಿಸಲಾಗಿದೆ. ಈ ಕಾನೂನು ಸಂಕಷ್ಟವು ಬಹುಅಪೇಕ್ಷಿತ ಕ್ರೀಡಾ ವಿಷಯದ ಸಿನಿಮಾ '83' ಚಿತ್ರದ ಬಿಡುಗಡೆಗೆ ಅಥವಾ ಅದರ ನಿರ್ಮಾಪಕರಿಗೆ ವೈಯಕ್ತಿಕವಾಗಿ ಯಾವ ರೀತಿ ತೊಂದರೆ ಮಾಡಬಹುದೆಂದು ಕಾದುನೋಡಬೇಕಿದೆ.