ನಿಜಕ್ಕೂ ಧಮ್-ತಾಕತ್ತು ಇದ್ದರೆ ಈ ಆದೇಶ ಹಿಂಪಡೆಯಿರಿ: ದಿನೇಶ್ ಗುಂಡೂರಾವ್ ಸವಾಲು

ಬೆಂಗಳೂರು, : 'ಸರಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಪೋಷಕರಿಂದ ಮಾಸಿಕ 100 ರೂ.ದೇಣಿಗೆಪಡೆಯಲು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಇದು ಅಸಹ್ಯಕರ ಮತ್ತು ನಾಚಿಕೆಗೇಡು. ಸರಕಾರಿ ಶಾಲೆಯಲ್ಲಿ ಓದುತ್ತಿರುವವರು ಬಹುತೇಕ ಬಡವರ ಮಕ್ಕಳು. ಸರಕಾರ ಅವರಿಂದಲೂ ಪ್ರತಿ ತಿಂಗಳು ದುಡ್ಡು ಪೀಕಲು ಹೊರಟಿರುವುದು ಅಸಹ್ಯವಲ್ಲದೆ ಮತ್ತೇನು?'
ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಅವರು, 'ಬಡ ಮಕ್ಕಳ ಪೋಷಕರಿಂದ ದುಡ್ಡು ತೆಗೆದುಕೊಳ್ಳುವ ಸ್ಥಿತಿಗೆ ಸರಕಾರ ತಲುಪಿದೆ ಎಂದರೆ ಅರ್ಥವೇನು? ಈ ಸರಕಾರಕ್ಕೆ ದರಿದ್ರ ಬಡಿದಿದೆಯೆ? ಉಚಿತ ಹಾಗೂ ಗುಣಮಟ್ಟದ ಶಿಕ್ಷಣ ಕೊಡುವುದು ಸರಕಾರದ ಕರ್ತವ್ಯ. ಆದರೆ, ಮರ್ಯಾದೆಯಿಲ್ಲದ ಈ ಸರಕಾರ ಪೋಷಕರಿಂದಲೇ ಹಣದ ವಸೂಲಿಗೆ ಇಳಿದಿದೆ. ಶಾಲೆಗಳಿಗೂ ಅನುದಾನ ಕೊಡದಷ್ಟು ಪಾಪರ್ ಆಗಿದೆಯೇ ಈ ಸರಕಾರ?' ಎಂದು ಪ್ರಶ್ನಿಸಿದ್ದಾರೆ.
'ಶೇ.40ರಷ್ಟು ಕಮೀಷನ್ ತಿಂದು ಕೊಬ್ಬಿದ ಗೂಳಿಗಳಾಗಿರುವ ಈ ಸರಕಾರಕ್ಕೆ ಕಮೀಷನ್ ಹಣ ಸಾಕಾಗಲಿಲ್ಲವೆ? ಈಗ ಬಡ ಮಕ್ಕಳ ಪೋಷಕರ ಹಣಕ್ಕೂ ಕನ್ನ ಹಾಕಿ ಜೇಬು ತುಂಬಿಸಿಕೊಳ್ಳಲು ಈ ಆದೇಶವೆ? ಪೋಷಕರಿಂದಲೇ ಹಣ ಪೀಕುವ ಈ ಸರಕಾರ, ಇನ್ನು ಮಕ್ಕಳಿಗೆ ಶೂ,ಸಾಕ್ಸ್, ಸಮವಸ್ತ್ರ, ಹಾಲು, ಬಿಸಿಯೂಟ ಹಾಗೂ ಪುಸ್ತಕ ಕೊಡುತ್ತಾರಾ? ಇದು ಮಾನಗೆಟ್ಟ ಸರಕಾರವಲ್ಲವೆ?' ಎಂದು ಅವರು ಕಿಡಿಕಾರಿದ್ದಾರೆ.
'ಬಡ ಮಕ್ಕಳ ಪೋಷಕರಿಂದ ಪ್ರತಿ ತಿಂಗಳು 100 ರೂ.ಗೆ ಕೈ ಚಾಚುವ ದೈನೇಸಿ ಸ್ಥಿತಿಗೆ ಈ ಸರಕಾರ ಬಂದಿದೆ. ಈ ಸರಕಾರ ದಿವಾಳಿಯೆದ್ದು ಹೋಗಿರುವ ಸ್ಪಷ್ಟ ಲಕ್ಷಣವಿದು. ಬೊಮ್ಮಾಯಿಯವರೆ ಧಮ್-ತಾಕತ್ತು ಎಂದು ಭಾಷಣ ಬಿಗಿದರೆ ಸಾಲದು. ನಿಮ್ಮ ಧಮ್-ತಾಕತ್ತು ತೋರಿಸಬೇಕಿರುವುದು ಇಂತಹ ವಿಷಯದಲ್ಲಿ. ನಿಮಗೆ ನಿಜಕ್ಕೂ ತಾಕತ್ತಿದ್ದರೆ ಈ ಆದೇಶ ಹಿಂಪಡೆಯಿರಿ' ಎಂದು ದಿನೇಶ್ ಗುಂಡೂರಾವ್ ಸವಾಲು ಹಾಕಿದ್ದಾರೆ.