ಇದೆಲ್ಲಾ ನನ್ನ ಗೌರವಕ್ಕೆ ಧಕ್ಕೆ ತರಲು ಮಾಡುತ್ತಿರುವ ಅಪಪ್ರಚಾರ": ಮಂಗ್ಲಿ

ಇದೆಲ್ಲಾ ನನ್ನ ಗೌರವಕ್ಕೆ ಧಕ್ಕೆ ತರಲು ಮಾಡುತ್ತಿರುವ ಅಪಪ್ರಚಾರ": ಮಂಗ್ಲಿ

ತೆಲುಗು ಗಾಯಕಿ ಮೊನ್ನೆ ಬಳ್ಳಾರಿ ಉತ್ಸವದಲ್ಲಿ ಭಾಗಿ ಆಗಿದ್ದರು. ಮೊದಲ ಬಾರಿಗೆ ಗಣಿ ನಾಡಲ್ಲಿ ಅದ್ಧೂರಿಯಾಗಿ ಕಾರ್ಯಕ್ರನ ನಡೆದಿತ್ತು. ಕಾರ್ಯಕ್ರಮ ಮುಗಿಸಿ ಹೊರಟಿದ್ದ ಮಂಗ್ಲಿ ಅವರ ಕಾರಿನ ಮೇಲೆ ಪುಂಡರು ದಾಳಿ ನಡೆಸಿದ್ದಾರೆ, ಕಾರಿನ ಗಾಜು ಪುಡಿ ಪುಡಿ ಆಗಿದೆ ಎನ್ನುವ ಸುದ್ದಿ ಹರಿದಾಡಿತ್ತು.

ಈ ಬಗ್ಗೆ ಗಾಯಕಿ ಮಂಗ್ಲಿ ಈಗ ಪ್ರತಿಕ್ರಿಯೆ ನೀಡಿದ್ದಾರೆ. ಅದೆಲ್ಲಾ ಸುಳ್ಳು, ಅಂತಹ ಘಟನೆ ನಡೆದೇ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಶನಿವಾರ ಬಳ್ಳಾರಿಯ ಮುನಿಸಿಪಲ್ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ ನಡೆದಿತ್ತು. ಮಂಗ್ಲಿ ಹಾಡು ಹಾಡಿ ತೆರಳುವಾಗ ದೊಡ್ಡ ಸಂಖ್ಯೆಯಲು ಯುವಕರು ಆಕೆಯನ್ನು ನೋಡಲು ಮುಗಿಬಿದ್ದಿದ್ದರು. ವೇದಿಕೆ ಹಿಂಭಾಗದಲ್ಲಿದ್ದ ಮೇಕಪ್ ಟೆಂಟ್ ಮೇಲೂ ಮುಗಿಬಿದ್ದಿದ್ದರು. ಈ ವೇಳೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಆ ನಂತರ ಕಿಡಿಗೇಡಿಗಳು ಮಂಗ್ಲಿ ಕಾರಿನ ಮೇಲೆ ದಾಳಿ ನಡೆಸಿದ್ದಾರೆ ಎನ್ನಲಾಗಿತ್ತು. ಚಿಕ್ಕಬಳ್ಳಾಪುರದಲ್ಲಿ ಆಕೆ ಕನ್ನಡದ ಬಗ್ಗೆ ಅಸಡ್ಡೆ ತೋರಿದ್ದಕ್ಕೆ ಈ ರೀತಿ ಆಗಿದೆ ಎಂದು ಕೆಲವರು ಅದನ್ನು ಸಮರ್ಥಿಸಿಕೊಂಡಿದ್ದರು. ಆದರೆ ಅಂತಹ ಘಟನೆ ನಡೆದೇ ಇಲ್ಲ ಎಂದು ಮಂಗ್ಲಿ ಟ್ವೀಟ್ ಮಾಡಿದ್ದಾರೆ.

"ಬಳ್ಳಾರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನನ್ನ ಮೇಲೆ ದಾಳಿ ನಡೆದಿದೆ ಎಂದು ಕೆಲವು ಸೋಶಿಯಲ್ ಮೀಡಿಯಾ ಗ್ರೂಪ್ಸ್ ಪ್ರಚಾರ ಮಾಡುತ್ತಿರುವುದನ್ನು ನಾನು ಖಂಡಿಸುತ್ತೇನೆ. ಫೋಟೋಗಳು ಮತ್ತು ವಿಡಿಯೋದಲ್ಲಿ ಕಾಣುವಂತೆ ಈವೆಂಟ್ ಬಹಳ ಅದ್ಧೂರಿಯಾಗಿ ಯಶಸ್ವಿಯಾಗಿ ನೆರವೇರಿದೆ. ಅಷ್ಟೇ ಅಲ್ಲ ಇದೊಂದು ಅತ್ಯುತ್ತಮ ಕಾರ್ಯಕ್ರಮ ಆಗಿತ್ತು. ಕನ್ನಡಿಗರು ನಮ್ಮ ಮೇಲೆ ತೋರಿದ ಪ್ರೀತಿ ಮತ್ತು ಬೆಂಬಲಕ್ಕೆ ಹೃದಯ ತುಂಬಿ ಬಂತು. ಈವೆಂಟ್‌ನಲ್ಲಿ ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಂಡರು, ಇದನ್ನು ಮಾತುಗಳಲ್ಲಿ ವರ್ಣಿಸಲಾಗದು . ಇದೆಲ್ಲಾ ನನ್ನ ಗೌರವಕ್ಕೆ ಧಕ್ಕೆ ತರಲು ಮಾಡುತ್ತಿರುವ ಅಪಪ್ರಚಾರ. ಈ ರೀತಿಯ ಪ್ರಚಾರವನ್ನು ನಾನು ಖಂಡಿಸುತ್ತಿದ್ದೇನೆ" ಎಂದು ಮಂಗ್ಲಿ ಸ್ಪಷ್ಟಪಡಿಸಿದ್ದಾರೆ.

ಈ ಸುದ್ದಿ ಬಗ್ಗೆ ಬಳ್ಳಾರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಂಜಿತ್‌ ಕುಮಾರ್‌ ಬಂಡಾರ ಮಾಹಿತಿ ನೀಡಿದ್ದಾರೆ. ಕಾರಿನ ಮೇಲೆ ಯಾವುದೇ ವಸ್ತು ಬಿದ್ದು ಮುಂಭಾಗದ ಗಾಜು ಒಡೆದಿರಬಹುದು. ಕಲ್ಲು ತೂರಾಟ ಆಗಿಲ್ಲ. ಅಪ್ಪು ಪುತ್ಥಳಿ ಅನಾವರಣಗೊಳಿಸುವ ಕಾರ್ಯಕ್ರಮ ವಿಳಂಬವಾಗಿತ್ತು. ಜನಸಂದಣಿ ಹೆಚ್ಚಾಗಿತ್ತು. ಹೆಚ್ಚು ಜನದಟ್ಟಣೆ ಇದ್ದ ಕಾರಣ ಸ್ವಲ್ಪ ಸಮಸ್ಯೆ ಆಗಿದೆ. ಅಷ್ಟು ಬಿಟ್ಟರೆ ಪೊಲೀಸರು ಲಾಠಿ ಪ್ರಹಾರ ಕೂಡ ನಡೆಸಿಲ್ಲ. ಮಂಗ್ಲಿ ಅವರ ಕಾರಿನ ಮೇಲೆ ದಾಳಿಯೂ ನಡೆದಿಲ್ಲ ಎಂದಿದ್ದಾರೆ.

ತೆಲುಗು ಗಾಯಕಿ ಮಂಗ್ಲಿ ಕನ್ನಡ ಸಿನಿಮಾ ಹಾಡುಗಳನ್ನು ಹಾಡಿದ್ದಾರೆ. ಅಲಾ ವೈಕುಂಠಪುರಂಲೋ ಚಿತ್ರದ 'ರಾಮುಲೋ ರಾಮುಲಾ' ಹಾಡಿನಿಂದ ದೊಡ್ಡಮಟ್ಟದ ಜನಪ್ರಿಯತೆ ಸಿಕ್ಕಿತ್ತು. ಅಲ್ಲಿಂದ ಮುಂದೆ ಹಲವು ಹಾಡುಗಳನ್ನು ಹಾಡಿದರು. ಕನ್ನಡದ 'ಏಕ್‌ಲವ್ ಯಾ' ಚಿತ್ರದಲ್ಲಿ 'ಎಣ್ಣೆಗೂ ಹೆಣ್ಣೆಗೂ' ಹಾಡನ್ನು ಹಾಡಿದ್ದರು. 'ಪುಷ್ಪ' ಚಿತ್ರದ 'ಹ್ಞೂ ಅಂತಿಯಾ ಮಾಮಾ' ಕನ್ನಡ ಹಾಡನ್ನು ಇದೇ ಮಂಗ್ಲಿ ಹಾಡಿದ್ದರು. ಸದ್ಯ ಕನ್ನಡದ 'ಪಾದಾರಾಯ' ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಅವಕಾಶವೂ ಸಿಕ್ಕಿದೆ. ಚಕ್ರವರ್ತಿ ಚಂದ್ರಚೂಡ್ ನಿರ್ದೇಶನದ ಈ ಚಿತ್ರದಲ್ಲಿ ನಾಗೇಶೇಖರ್ ಜೋಡಿಯಾಗಿ ಮಂಗ್ಲಿ ನಟಿಸುತ್ತಿದ್ದಾರೆ.