ಲುಡೋ ಗೇಮ್​ನಿಂದ ಹುಟ್ಟಿದ ಪ್ರೀತಿ! ಪಾಕಿಸ್ತಾನದಿಂದ ಬೆಂಗಳೂರಿಗೆ ಬಂದ ಯುವತಿ ಸೇರಿ ಮೂವರ ಬಂಧನ

ಲುಡೋ ಗೇಮ್​ನಿಂದ ಹುಟ್ಟಿದ ಪ್ರೀತಿ! ಪಾಕಿಸ್ತಾನದಿಂದ ಬೆಂಗಳೂರಿಗೆ ಬಂದ ಯುವತಿ ಸೇರಿ ಮೂವರ ಬಂಧನ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪಾಕಿಸ್ತಾನ (Pakistan Woman) ಮೂಲದ ಯುವತಿಯನ್ನು ಬಂಧಿಸಲಾಗಿದೆ. ಬಂಧಿತಳನ್ನು ಇಕ್ರಾ ಜೀವನಿ (19) ಎಂದು ಗುರುತಿಸಲಾಗಿದೆ. ಉತ್ತರ ಪ್ರದೇಶ ಮೂಲದ ವ್ಯಕ್ತಿಯನ್ನು ಮದುವೆಯಾಗಿ ನಗರದ ಸರ್ಜಾಪುರ ರಸ್ತೆಯ ಜನ್ನಸಂದ್ರದಲ್ಲಿ ವಾಸವಾಗಿದ್ದಳು.

ಆಕೆಯನ್ನು ಬೆಳ್ಳಂದೂರು ಪೊಲೀಸರು (Bellandur Police Station) ಬಂಧಿಸಿದ್ದಾರೆ.

ನೇಪಾಳ (Nepal)ದ ಪಾಸ್​ಪೋರ್ಟ್ ಬಳಸಿ ನಗರಕ್ಕೆ ಬಂದಿದ್ದ ಇಕ್ರಾ, ಪಾಕಿಸ್ತಾನ (Pakistan) ದಲ್ಲಿರುವ ತನ್ನ ತಾಯಿಯನ್ನು ಸಂಪರ್ಕಿಸಲು ಯತ್ನಿಸಿದ್ದಳು. ಇದರ ಬಗ್ಗೆ ರಾಜ್ಯ ಪೊಲೀಸರಿಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಇದನ್ನು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ.

ಆರೋಪಿ ಇಕ್ರಾ, ರವ ಯಾದವ್ ಎನ್ನುವ ಹೆಸರಲ್ಲಿ ನಕಲಿ ಆಧಾರ್ ಕಾರ್ಡ್ (Fake aadhar card) ಮಾಡಿಸಿಕೊಂಡಿದ್ದಳು. ಮುಲಾಯಂ ಸಿಂಗ್ ಯಾದವ್​ ಎಂಬಾತ ಈಕೆಯನ್ನು ನೇಪಾಳದ ಮೂಲಕ ಬಿಹಾರಕ್ಕೆ ಕರೆಸಿಕೊಂಡು, ಅಲ್ಲಿಂದ ರಾಜ್ಯಕ್ಕೆ ಕರೆತಂದಿದ್ದ. ಇವರಿಂದ ಸರಿಯಾಗಿ ದಾಖಲೆ ಪಡೆಯದೆ ಗೋವಿಂದ ರೆಡ್ಡಿ ಎಂಬಾತ ಮನೆ ಬಾಡಿಗೆ ನೀಡಿದ್ದ. ಸದ್ಯ ಮುಲಾಯಂ ಸಿಂಗ್ ಹಾಗೂ ಗೋವಿಂದ ರೆಡ್ಡಿಯನ್ನೂ ಬಂಧಿಸಲಾಗಿದೆ.

ಇದು ಇಂಡಿಯಾ ಟು ಪಾಕಿಸ್ತಾನ್ ಲವ್ ಸ್ಟೋರಿ!
ಮುಲಾಯಂ ಸಿಂಗ್ ಎಚ್‌ಎಸ್‌ಆರ್ ಲೇಔಟ್​ನ ಕಂಪನಿಯೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದ. ಈ ವೇಳೆ ಗೇಮಿಂಗ್ ಆಯಪ್‌ LUDOನಲ್ಲಿ ಪಾಕಿಸ್ತಾನದ ಇಕ್ರಾ ಜೀವಾನಿ ಪರಿಚಯವಾಗಿದೆ. ಬಳಿಕ ಪರಿಚಯ ಪ್ರೇಮಕ್ಕೆ ತಿರುಗಿ, ಇಬ್ಬರು ಮದುವೆಯಾಗಲು ನಿರ್ಧರಿಸಿದರು. ಈ ಹಿನ್ನೆಲೆಯಲ್ಲಿ ಇಕ್ರಾ ಜೀವಾನಿಯನ್ನು ಭಾರತಕ್ಕೆ ಕರೆತಂದಿದ್ದ ಮುಲಾಯಂ ಸಿಂಗ್, ಆಕೆಯೊಂದಿಗೆ ಒಟ್ಟಿಗೆ ವಾಸವಿದ್ದ. ಇದೀಗ ಇಬ್ಬರು ಸಿಕ್ಕಿಬಿದ್ದಿದ್ದಾರೆ. ಬಂಧಿತ ಇಕ್ರಾ ಜೀವಾನಿ ಪಾಕಿಸ್ತಾನದ ಹೈದರಾಬಾದ್ ಮೂಲದವಳು. (ದಿಗ್ವಿಜಯ ನ್ಯೂಸ್​)