ಸಮಾಜ ಸೇವೆ ಅತ್ಯಂತ ಶ್ರೇಷ್ಠ ಕಾಯಕ

ಕಲಬುರಗಿ,ಅ.3:ಇಲ್ಲವೆಂದು ಕೊರಗುವುದರ ಬದಲಿಗೆ, ಇರುವುದರಲ್ಲಿಯೇ ಸಮಾಜ ಸೇವೆ ಮಾಡುವ ಮನೋಭಾವನೆ ಮುಖ್ಯ, ಇದು ಅತ್ಯಂತ ಶ್ರೇಷ್ಠ ಕಾಯಕವಾಗಿದೆ. ಸಂಕಷ್ಟದಲ್ಲಿರುವ ಜೀವಗಳಿಗೆ ಮಿಡಿದು ಅವರಿಗೆ ನೆರವಾಗುವ ಕೆಲಸವನ್ನು ನಾಲ್ಕು ಚಕ್ರ ತಂಡದವರು ಮಾದರಿಯಾಗಿ ಮಾಡಿಕೊಂಡು ಬರುತ್ತಿದ್ದಾರೆ ಎಂದು ಉದ್ಯಮಿ ಹಾಗೂ ಸಮಾಜ ಸೇವಕಿ ರೂಪಾಲಿ ರವಿಕುಮಾರ ಹೇಳಿದರು.
ನಗರದ ಕನ್ನಡ ಭವನದಲ್ಲಿ ಸೋಮವಾರ ನಾಲ್ಕು ಚಕ್ರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಕಾಯಕ ಸ್ತ್ರೀ ಪ್ರಶಸ್ತಿ ಪ್ರದಾನ ಹಾಗೂ ಆಜಾದಿ ಕಾ ಅಮೃತ ಮಹೋತ್ಸವ ನಿಮಿತ್ತ ಜರುಗಿದ 750 ಮೀಟರ್ ರಾಷ್ಟ್ರಧ್ವಜ ಮೆರವಣಿಗೆ ಯಶಸ್ವಿಗೊಳಿಸಲು ಶ್ರಮಿಸಿದವರಿಗೆ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಸಮಾಜಮುಖಿ ಕೆಲಸಗಳು ನಮ್ಮನ್ನು ಗುರುತಿಸುವಂತಾಗಬೇಕು ಎಂಬುದಕ್ಕೆ ಮಾಲಾದ್ವಯರು ಸಾಕ್ಷಿಯಾಗಿದ್ದಾರೆ. ಅವರು ಇತರರಿಗೆ ಸ್ಪೂರ್ತಿಯಾಗಿದ್ದಾರೆ. ಅವರಲ್ಲಿನ ಆತ್ಮ ವಿಶ್ವಾಸ ಅಮೋಘವಾಗಿದೆ. ತೊಂದರೆಯಲ್ಲಿರುವವರ ಬಗ್ಗೆ ಮಿಡಿಯು ಅವರು ಕಲಬುರಗಿಯ ಕೀರ್ತಿ ಹೆಚ್ಚಿಸಿದ್ದಾರೆ. ಕೋವಿಡ್ ಕಷ್ಟ ಕಾಲದಲ್ಲಿ ಮಾಡಿರುವ ಕೆಲಸಗಳನ್ನು ಸ್ಮರಿಸಿದರು.
ಸಮಾರಂಭವನ್ನು ಹೊಟೇಲ್ ಮಾಲೀಕರ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ಸತ್ಯನಾಥ ಶೆಟ್ಟಿ ಉದ್ಘಾಟಿಸಿ, ನಾಲ್ಕು ಚಕ್ರ ತಂಡದವರ ಸಮಾಜಮುಖಿ ಕೆಲಸಗಳೊಂದಿಗೆ ನಾವು ಕೈಜೋಡಿಸುತ್ತೇವೆ ಎಂದರು.
ಸಮಾರಂಭದಲ್ಲಿ ಶರಣಬಸವ ವಿಶ್ವವಿದ್ಯಾಲಯ ಡೀನ್ ಡಾ.ಲಕ್ಷ್ಮೀ ಪಾಟೀಲ ಮಾಕಾ, ಸ್ತ್ರೀ ರೋಗ ತಜ್ಞೆ ಡಾ.ಮೀತಾ ಅಂಗಡಿ, ನಿರೂಪಕಿ ಸಂಗೀತಾ ಕಂತಿ, ಭರತನಾಟ್ಯ ಕಲಾವಿದೆ ಪೂಜಾ ಭಾವಿಕಟ್ಟಿ ಅವರಿಗೆ ಕಾಯಕ ಸ್ತ್ರೀ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಅಲ್ಲದೆ ಸಾಧಕರಾದ ಕೆಕೆಸಿಸಿಐ ಕಾರ್ಯದರ್ಶಿ ಶರಣು ಪಪ್ಪಾ, ಖ್ಯಾತ ವೈದ್ಯ ಡಾ.ಮಲ್ಹಾರಾವ ಮಲ್ಲೆ, ಹೊಟೇಲ್ ಉದ್ಯಮಿ ಪ್ರವೀಣ ಜತ್ತನ್, ಸಾಹಿತಿ ರೇಣುಕಾ ಶ್ರೀಕಾಂತ, ಗುರೂಜಿ ಕಾಲೇಜಿನ ಸಂಸ್ಥಾಪಕ ಕಲ್ಯಾಣರಾವ ಶೀಲವಂತ ಅವರಿಗೆ ವಿಶೇಷ ಸನ್ಮಾನ ಮಾಡಲಾಯಿತು.