ಪರಿಷತ್ ನಲ್ಲಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವ ವಿಶ್ವಾಸವಿದೆ: ಮಾಜಿ ಸಿಎಂ ಬಿಎಸ್ ವೈ

ದಾವಣಗೆರೆ: ವಿಧಾನ ಪರಿಷತ್ತು ಚುನಾವಣೆಯಲ್ಲಿ ನೂರಕ್ಕೂ ನೂರು 15 ಕ್ಷೇತ್ರ ಗೆಲ್ಲುತ್ತೇವೆ. ಪರಿಷತ್ ನಲ್ಲಿ ಯಾರ ಮೇಲೆ ಡಿಪೆಂಡ್ ಆಗಲ್ಲ. ಸ್ವಂತ ಬಲದಲ್ಲಿ ಅಧಿಕಾರ ಹಿಡಿಯಬೇಕು ಎಂಬ ಉದ್ದೇಶ ನಮ್ಮದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಮಂಗಳವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಕ್ಷೇತ್ರದಲ್ಲಿ ಲಖನ್ ಜಾರಕಿಹೊಳಿ ಸ್ಪರ್ಧೆ ಬಗ್ಗೆ ಪ್ರತಿಕ್ರಿಯೆ ನೀಡಿ, ನಮ್ಮ ಪ್ರಯತ್ನ ನಾವು ಮಾಡ್ತೇವೆ, ಏನಾಗುತ್ತೋ ನೋಡೋಣ ಎಂದರು.
ಸಚಿವ ಸಂಪುಟ ವಿಸ್ತರಣೆ ವಿಚಾರದ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ವಿಜಯೇಂದ್ರಗೆ ಸಚಿವ ಸ್ಥಾನ ಕೇಳುವ ಪ್ರಶ್ನೆ ಇಲ್ಲ. ನಾನು ಸಂಪುಟ ವಿಸ್ತರಣೆ ವಿಚಾರದಲ್ಲಿ ಮಧ್ಯೆ ಪ್ರವೇಶ ಮಾಡಲ್ಲ. ಎಲ್ಲಾ ಕೇಂದ್ರ ನಾಯಕರಿಗೆ ಬಿಟ್ಟ ವಿಚಾರ ನಾನು ಯಾವುದೇ ಸಲಹೆ ಕೊಟ್ಟಿಲ್ಲ ಎಂದು ಹೇಳಿದರು.
ಬಾದಾಮಿಯಲ್ಲಿ ಮಾಜಿ ಸಚಿವ ಚಿಮ್ಮನಕಟ್ಟಿ ಕಣ್ಣೀರು ಹಾಕಿರುವ ವಿಚಾರದ ಪ್ರತಿಕ್ರಿಯೆ ನೀಡಿದ ಅವರು, ಎಲ್ಲಾ ಮಾಧ್ಯಮಗಳಲ್ಲಿ ಘಟನೆ ಬಗ್ಗೆ ಬರುತ್ತಿದೆ. ಆ ಬಗ್ಗೆ ನಾನು ರಿಯಾಕ್ಷನ್ ಕೊಡಲ್ಲ ಮುಂದೆ ಏನಾಗುತ್ತೋ ಕಾದು ನೋಡೋಣ ಎಂದು ತಿಳಿಸಿದರು.