'APL ಕಾರ್ಡ್'ದಾರರಿಗೆ ಮೂರು ತಿಂಗಳಿನಿಂದ ಪಡಿತರ ಸ್ಥಗಿತ: ರಾಜ್ಯ ಸರ್ಕಾರ ಏನ್ ಕುಂಭಕರ್ಣ ನಿದ್ದೆಯಲ್ಲಿದೆಯಾ ಎಂದು HDK ಕಿಡಿ

'APL ಕಾರ್ಡ್'ದಾರರಿಗೆ ಮೂರು ತಿಂಗಳಿನಿಂದ ಪಡಿತರ ಸ್ಥಗಿತ: ರಾಜ್ಯ ಸರ್ಕಾರ ಏನ್ ಕುಂಭಕರ್ಣ ನಿದ್ದೆಯಲ್ಲಿದೆಯಾ ಎಂದು HDK ಕಿಡಿ

ಬೆಂಗಳೂರು: ಸಾರ್ವಜನಿಕ ಪಡಿತರ ವ್ಯವಸ್ಥೆಯಡಿ ಆದ್ಯತೆರಹಿತ ಕಾರ್ಡ್ ದಾರರಿಗೆ (ಎಪಿಎಲ್) ರಿಯಾಯಿತಿ ದರದಲ್ಲಿ ನೀಡುವ ಅಕ್ಕಿ ಮೂರು ತಿಂಗಳಿಂದ ಸ್ಥಗಿತಗೊಂಡಿದೆ. ರಾಜ್ಯದ ಕೆಲವು ಭಾಗಗಳಲ್ಲಿ ಮಾತ್ರ ಅಸಮರ್ಪಕವಾಗಿ, ಅನಿಯಮಿತವಾಗಿ ಪೂರೈಕೆಯಾಗುತ್ತಿದೆ ಎಂದು ಮಾಧ್ಯಮ ವರದಿ ಮಾಡಿದೆ.

ರಾಜ್ಯ ಬಿಜೆಪಿ ಸರ್ಕಾರ ( BJP Government ) ಕುಂಭಕರ್ಣ ನಿದ್ದೆಯಲ್ಲಿದೆ ಎಂಬುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.ಈ ಬಗ್ಗೆ ಇಂದು ಟ್ವಿಟ್ ಮಾಡಿರುವಂತ ಅವರು, ಬಹುತೇಕ ಜಿಲ್ಲೆಗಳಲ್ಲಿ ಎಪಿಎಲ್ ಕುಟುಂಬಗಳಿಗೆ ಮೀಸಲಾದ ಅಕ್ಕಿಯನ್ನು ಇತರೆ ಯೋಜನೆಗಳಿಗೆ ಬಳಕೆ ಮಾಡಲಾಗಿದೆ. ಹೀಗಾಗಿ, ಅಕ್ಕಿಗೆ ಬೇಡಿಕೆ ಇರುವ ಜಿಲ್ಲೆಗಳಲ್ಲೂ ಪೂರೈಕೆ ವ್ಯತ್ಯಯವಾಗಿದೆ. ಸಿಎಂ ಬೊಮ್ಮಾಯಿಯವರೆ, ನಿಮ್ಮ ಸರ್ಕಾರದ ಸಚಿವರುಗಳು ಯಾವ ಘನಂದಾರಿ ಕೆಲಸಗಳಲ್ಲಿ ಮುಳುಗಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.ತಾಂತ್ರಿಕ ಸಮಸ್ಯೆಗಳಿಂದ ಬಿಪಿಎಲ್ ಕಾರ್ಡ್ ದಾರರೂ ಪಡಿತರ ಪಡೆಯಲು ಪರದಾಡುತ್ತಿರುವ ಸಂಗತಿಯೂ ವರದಿಯಾಗಿದೆ. ಹಸಿವಿನಿಂದ ಯಾರೂ ಮಲಗಬಾರದು ಎಂಬ ಧ್ಯೇಯೊದ್ದೇಶ ಹೊಂದಿರುವ ಈ ಪಡಿತರ ವ್ಯವಸ್ಥೆಯು ಅವ್ಯವಸ್ಥೆಯ ಆಗರವಾಗಿರುವುದಕ್ಕೆ ಸರ್ಕಾರವೇ ನೇರ ಹೊಣೆ ಎಂದು ವಾಗ್ಧಾಳಿ ನಡೆಸಿದ್ದಾರೆ.ಸಮಯ ಇನ್ನೂ ಮೀರಿಲ್ಲ. ಈಗಲಾದರೂ, ಅಗತ್ಯ ಕ್ರಮಗಳನ್ನು ಕೈಗೊಂಡು ಜನತೆಗೆ ಪಡಿತರ ಸಿಗುವ ಅನುಕೂಲ ಕಲ್ಪಿಸಬೇಕಿದೆ ಸರ್ಕಾರ. ಚುನಾವಣೆ ಸಮಯ ಎಂದು ಉಡಾಫೆ ಮಾಡಿದರೆ, ಜನತೆ ಹಸಿವಿನಿಂದ ನರಳಬೇಕಾಗುತ್ತದೆ. ಮಾನವೀಯತೆ ಇಲ್ಲದ ಆಡಳಿತ ವಿಕೃತಿಗೆ ಸಮ ಎಂಬುದಾಗಿ ಕಿಡಿಕಾರಿದ್ದಾರೆ.