9 ವರ್ಷಗಳ ನಂತರ ಜಾತಿ ನೆನಪಾಯ್ತಾ? ಎರಡನೇ ಮದ್ವೇಗೆ ಸಜ್ಜಾದವನ ವಿರುದ್ಧ ಪತ್ನಿ ದೂರು

9 ವರ್ಷಗಳ ನಂತರ ಜಾತಿ ನೆನಪಾಯ್ತಾ? ಎರಡನೇ ಮದ್ವೇಗೆ ಸಜ್ಜಾದವನ ವಿರುದ್ಧ ಪತ್ನಿ ದೂರು

ಹಾಸನ : ಪ್ರೀತಿಸಿ ಮದುವೆಯಾಗಿ 9 ವರ್ಷ ಸಂಸಾರ ಮಾಡಿದ ನಂತರ ಕೈಕೊಟ್ಟು, ಮೊದಲ ಮದುವೆ ಮುಚ್ಚಿಟ್ಟು ಮತ್ತೊಂದು ಮದುವೆ ಆಗಲು ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ ಎಂದು ಮಹಿಳೆಯೊಬ್ಬಳು ಪತಿಯ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಕುಂದೂರು ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ.

ಕಾಲೇಜಿನಲ್ಲಿ ಪರಿಚಯವಾದ ಅಕ್ಷತಾ ಮತ್ತು ಲೋಹಿತ್ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾಗಿ 8 ವರ್ಷದ ಮಗನಿದ್ದರೂ ಈಗ ಬೇರೆ ಮದುವೆ ಮಾಡಲು ಲೋಹಿತ್ ಕುಟುಂಬ ಪ್ಲಾನ್ ಮಾಡುತ್ತಿದೆ ಎನ್ನಲಾಗಿದೆ. ವಂಚಕ ಪತಿ ಮದುವೆ ವಿಚಾರ ಮುಚ್ಚಿಟ್ಟು ದಕ್ಷಿಣ ಕನ್ನಡ ಮೂಲದ ಯುವತಿ ಜೊತೆಗೆ ಎಂಗೇಜ್ಮೆಂಟ್ ಆಗಿದ್ದಾನೆ ಎಂದು ಆರೋಪಿಸಿರುವ ಪತ್ನಿ ಅಕ್ಷತಾ, ಸುಳ್ಳು ಹೇಳಿ ಹುಡುಗಿಯನ್ನು ನಂಬಿಸಿರುವ ಬಗ್ಗೆ ಆಡಿಯೋ ಸಾಕ್ಷಿಯೊಂದಿಗೆ ಕಾನೂನು ಹೋರಾಟಕ್ಕೆ ಸಜ್ಜಾಗಿದ್ದಾರೆ.

ಈ ಬಗ್ಗೆ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಅಕ್ಷತಾ, ಅನ್ಯ ಜಾತಿಯ ಹುಡುಗಿ ಎನ್ನುವ ಕಾರಣಕ್ಕೆ ಲೋಹಿತ್ ತಂದೆ ಮಲ್ಲಿಕಾರ್ಜುನ, ತಾಯಿ ಜಯಶೀಲಾ ಕಿರುಕುಳ ನೀಡುತ್ತಿದ್ದರು. ಈಗ ತನ್ನಿಂದ ಗಂಡನನ್ನು ದೂರ ಮಾಡಿ ಮದುವೆ ವಿಚಾರವನ್ನೇ ಮುಚ್ಚಿಟ್ಟು ಮತ್ತೊಂದು ಮದುವೆಗೆ ಪ್ಲಾನ್ ಮಾಡಿದ್ದಾರೆ. ಈ ವಂಚನೆ ತಪ್ಪಿಸಿ ನ್ಯಾಯ ಕೊಡಿಸಿ ಎಂದು ಪತಿ ಮತ್ತು ಅತ್ತೆಮಾವನ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.