ನಗರ ಸಾರಿಗೆ ಬಸ್​ನಲ್ಲಿ ಯುವತಿಯ ಎದುರೇ ಕಾಮುಕನಿಂದ ಹಸ್ತಮೈಥುನ: ದೂರು ಕೊಡಲು ಸಂತ್ರಸ್ತೆ ಹಿಂದೇಟು

ನಗರ ಸಾರಿಗೆ ಬಸ್​ನಲ್ಲಿ ಯುವತಿಯ ಎದುರೇ ಕಾಮುಕನಿಂದ ಹಸ್ತಮೈಥುನ: ದೂರು ಕೊಡಲು ಸಂತ್ರಸ್ತೆ ಹಿಂದೇಟು

ವದೆಹಲಿ: ನಗರ ಸಾರಿಗೆ ಬಸ್​ನಲ್ಲಿ ಯುವತಿಯೊಬ್ಬಳ ಮುಂದೆ ಕಾಮುಕನೊಬ್ಬ ಹಸ್ತಮೈಥುನ ಮಾಡುವ ಮೂಲಕ ತೀರಾ ಅಸಹ್ಯವಾಗಿ ವರ್ತಿಸಿದ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯ ರೋಹಿಣಿ ಏರಿಯಾದಲ್ಲಿ ನಡೆದಿದೆ.

ದೆಹಲಿಯ ನಗರ ಸಾರಿಗೆ ಡಿಟಿಸಿ ಬಸ್​ನಲ್ಲಿ ಕಳೆದ ಮಂಗಳವಾರ ಈ ಘಟನೆ ನಡೆದಿದೆ.

ಯುವತಿ ಅಳುತ್ತಾ ಕೂಗಿಕೊಂಡಿದ್ದನ್ನು ಕೇಳಿ, ಅಲ್ಲಿಯೇ ಇದ್ದ ಮಾರ್ಷಲ್​ ಆರೋಪಿಯನ್ನು ಹಿಡಿದುಕೊಂಡು ಆರೋಪಿಗೆ ಥಳಿಸಿದ್ದಾರೆ. ಆದರೆ, ಯಾವುದೇ ದೂರು ದಾಖಲಾಗದಿರುವ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯು ಬಿಹಾರದ ನಿವಾಸಿ ಎಂದು ತಿಳಿದುಬಂದಿದೆ. ಬುಧವಾರ ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ, ನಾರ್ಥ್​ ರೋಹಿಣಿ ಪೊಲೀಸ್​ ಠಾಣೆಯ ಸಬ್‌ ಇನ್ಸ್‌ಪೆಕ್ಟರ್ ಸುಮನ್ ನೇತೃತ್ವದಲ್ಲಿ ವಿಚಾರಣೆಯನ್ನು ಪ್ರಾರಂಭಿಸಲಾಗಿದೆ. ಹೇಳಿಕೆಯನ್ನು ದಾಖಲಿಸಲು ಅಥವಾ ಈ ಸಂಬಂಧ ಯಾವುದೇ ದೂರು ನೀಡಲು ಸಂತ್ರಸ್ತೆಯನ್ನು ಸಂಪರ್ಕಿಸಿದರೂ ಆಕೆ ಪ್ರತಿಕ್ರಿಯಿಸಲು ನಿರಾಕರಿಸಿದಳು ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಘಟನೆಗೆ ಸಂಬಂಧಿಸಿದಂತೆ ಯಾವುದೇ ದೂರು ಬಂದರೆ, ಕಾನೂನಿನ ಸೂಕ್ತ ಸೆಕ್ಷನ್‌ಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)