ಧಾರವಾಡ; ಕೋವಿಡ್ ಪತ್ತೆ, ಎಸ್‍ಡಿಎಂ ಹೊರರೋಗಿ ವಿಭಾಗ ಬಂದ್

ಧಾರವಾಡ; ಕೋವಿಡ್ ಪತ್ತೆ, ಎಸ್‍ಡಿಎಂ ಹೊರರೋಗಿ ವಿಭಾಗ ಬಂದ್

ಧಾರವಾಡ, ನವೆಂಬರ್ 26; ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಲ್ಲಿ ಸೋಂಕು ಪತ್ತೆಯಾಗಿದೆ.ಇದರಿಂದಾಗಿ ಭಾನುವಾರದ ತನಕ ಎಸ್‍ಡಿಎಂ ಹೊರರೋಗಿಗಳ ವಿಭಾಗದ ಸೇವೆ ಸ್ಥಗಿತಗೊಳಿಸಲಾಗಿದೆ. ತುರ್ತು ಚಿಕಿತ್ಸಾ ಸೇವೆ ಮುಂದುವರೆಯಲಿದ್ದು, ಆವರಣಕ್ಕೆ ಸಾರ್ವಜನಿಕರ ಪ್ರವೇಶವನ್ನು ಜಿಲ್ಲಾಡಳಿತ ನಿರ್ಬಂಧಿಸಿದೆ.ಕಳೆದ ಎರಡು ದಿನಗಳಿಂದ 182 ಜನರಲ್ಲಿ ಕೋವಿಡ್ ಸೋಂಕು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಧಾರವಾಡ ಜಿಲ್ಲಾಧಿಕಾರಿ ನಿತೇಶ ಕೆ. ಪಾಟೀಲ ಹೇಳಿದ್ದಾರೆ. ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಕಂದಾಯ ಇಲಾಖೆಗಳ ಹಿರಿಯ ಅಧಿಕಾರಿಗಳು ಶುಕ್ರವಾರ ಕ್ಯಾಂಪಸ್‌ಗೆ ಭೇಟಿ ನೀಡಿದರು.

ಜಿಲ್ಲಾಧಿಕಾರಿ ನಿತೇಶ ಕೆ. ಪಾಟೀಲ, ಜಿಲ್ಲಾ ಪಂಚಾಯಿತಿ ಸಿಇಓ ಡಾ. ಬಿ. ಸುಶೀಲಾ, ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಲಾಬೂರಾಮ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ. ಯಶವಂತ ಮದೀನಕರ, ಎಸ್‍ಡಿಎಂ ಮೆಡಿಕಲ್ ಕಾಲೇಜು ಪ್ರಾಚಾರ್ಯೆ ಡಾ. ರತ್ನಮಾಲಾ ದೇಸಾಯಿ ಮುಂತಾದವರು ಪರಿಶೀಲನೆ ನಡೆಸಿದರು.

"ಕೋವಿಡ್ ಸೋಂಕು ತೀವ್ರಗತಿಯಲ್ಲಿ ಹರಡುತ್ತಿರುವುದನ್ನು ನಿಯಂತ್ರಿಸಲು ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಎಸ್‍ಡಿಎಂ ಆಡಳಿತ ಮಂಡಳಿಯೂ ಕೂಡಲೇ ಸ್ಪಷ್ಠ ಕ್ರಿಯಾಯೋಜನೆ ರೂಪಿಸಿಕೊಂಡು ಆಸ್ಪತ್ರೆ ಆವರಣಕ್ಕೆ ಆಯ್ದ ಕೆಲವೇ ವೈದ್ಯರು ಮತ್ತು ಸಿಬ್ಬಂದಿಗೆ ಮಾತ್ರ ಪ್ರವೇಶ ಸೀಮಿತಗೊಳಿಸಬೇಕು" ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾದ ಸಮಾಜ ಕಲ್ಯಾಣ ಇಲಾಖೆ ಆಯುಕ್ತ ಡಾ. ರವಿಕುಮಾರ ಸುರಪುರ ಹೇಳಿದರು.

ಡಾ. ರವಿಕುಮಾರ ಸುರಪುರ ಶುಕ್ರವಾರ ಸಂಜೆ ಆನ್‌ಲೈನ್ ಮೂಲಕ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಹಾಗೂ ಎಸ್‍ಡಿಎಂ ಆಡಳಿತ ಮಂಡಳಿಯೊಂದಿಗೆ ಸಭೆ ನಡೆಸಿದರು. ಸೋಂಕು ಸದ್ಯ ಆಸ್ಪತ್ರೆ ಆವರಣದಲ್ಲಿ ಮಾತ್ರ ಇರುವುದರಿಂದ ಬಹಳ ಎಚ್ಚರಿಕೆ ವಹಿಸಿ ಅದರ ನಿಯಂತ್ರಣಕ್ಕೆ ಕ್ರಿಯಾಯೋಜನೆ ರೂಪಿಸಿ, ಜಾರಿಗೊಳಿಸಿಬೇಕು. ಜಿಲ್ಲಾಡಳಿತ, ಪೊಲೀಸ್ ಈಗಾಗಲೇ ಮುನ್ನೆಚ್ಚರಿಕೆ ವಹಿಸಿ ತೆಗೆದುಕೊಂಡಿರುವ ಕ್ರಮಗಳು ಉತ್ತಮವಾಗಿವೆ ಎಂದು ಹೇಳಿದರು. ಎಸ್‍ಡಿಎಂ ಆಡಳಿತ ಮಂಡಳಿಯೂ ಕೂಡಾ ಕ್ವಾರಂಟೈನ್‍ನಲ್ಲಿ ಇರುವ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಬೇರೆಯವರ ಸಂಪರ್ಕಕ್ಕೆ ಬರದಂತೆ ಎಚ್ಚರಿಕೆ ವಹಿಸಬೇಕು ಎಂದರು.

ನೆಗೆಟಿವ್ ವರದಿ ಹೊಂದುವುದು ಕಡ್ಡಾಯ

ಎಸ್‌ಡಿಎಂ ಆವರಣದಲ್ಲಿನ ವಿದ್ಯಾರ್ಥಿನಿಯರ ಹಾಗೂ ವಿದ್ಯಾರ್ಥಿಗಳ ಹಾಸ್ಟೆಲ್‌ಗಳಲ್ಲಿ ಪ್ರತ್ಯೇಕ ಆಂತರಿಕ ವಿಚಕ್ಷಣಾ ಜಾಗೃತ ದಳಗಳನ್ನು ರಚಿಸಿ, ಕಾರ್ಯನಿರ್ವಹಿಸಬೇಕು. ಆಸ್ಪತ್ರೆಗೆ ತೀರ ಅಗತ್ಯವಿರುವ ವೈದ್ಯರು ಮತ್ತು ಸಿಬ್ಬಂದಿಯನ್ನು ಸರದಿಯ ಮೇಲೆ ನಿಯೋಜಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಆದ್ಯತೆ ನೀಡಬೇಕು. 24 ಗಂಟೆಗಳ ಕಾಲ ಕೆಲಸ ಮಾಡಬೇಕು. ಆಸ್ಪತ್ರೆಯಿಂದ ಬಿಡುಗಡೆಯಾಗುವ ಎಲ್ಲ ರೋಗಿಗಳು ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಹೊಂದಿರುವುದು ಕಡ್ಡಾಯವಾಗಿದೆ. ನೆಗೆಟಿವ್ ವರದಿಯೊಂದಿಗೆ ಬಿಡುಗಡೆಯಾದ ವ್ಯಕ್ತಿಗಳು 7 ದಿನಗಳ ಕಾಲ ಐಸೋಲೇಷನ್‍ನಲ್ಲಿ ಇರಬೇಕು. 7 ದಿನಗಳ ಬಳಿಕ ಜಿಲ್ಲಾಡಳಿತ ಮತ್ತೊಮ್ಮೆ ಅವರ ಕೋವಿಡ್ ತಪಾಸಣೆ ಮಾಡಬೇಕು ಎಂದು ಸೂಚನೆ ನೀಡಲಾಯಿತು.ಹೊರ ರೋಗಿಗಳ ವಿಭಾಗ ಬಂದ್.

ಕೋವಿಡ್ ನೆಗೆಟಿವ್ ವರದಿ ಇಲ್ಲದ ಯಾರೊಬ್ಬರೂ ಎಸ್‍ಡಿಎಂ ಆವರಣದಿಂದ ಹೊರಹೋಗಲು ಅವಕಾಶ ನೀಡಬಾರದು ಎಂದು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಎಸ್‍ಡಿಎಂ ಆಸ್ಪತ್ರೆಗೆ ಧಾರವಾಡ ಹಾಗೂ ಸುತ್ತಮುತ್ತಲಿನ 6 ರಿಂದ 8 ಜಿಲ್ಲೆಗಳ ರೋಗಿಗಳು ಪ್ರತಿದಿನ ಸಾಮಾನ್ಯ ಚಿಕಿತ್ಸೆಗೆ ಬರುತ್ತಾರೆ. ಆದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ನವೆಂಬರ್ 28ರ ತನಕ ಆಸ್ಪತ್ರೆಯ ಹೊರರೋಗಿಗಳ ವಿಭಾಗದ ಸೇವೆಗಳು ಹಾಗೂ ಹೊಸ ರೋಗಿಗಳ ಪ್ರವೇಶವನ್ನು ಸ್ಥಗಿತಗೊಳಿಸಲಾಗಿದೆ. ತುರ್ತು ಚಿಕಿತ್ಸಾ ಸೇವೆಗಳು ಮಾತ್ರ ಮುಂದುವರೆಯಲಿವೆ.ಪರೀಕ್ಷೆಗೆ ತಂಡಗಳನ್ನು ನಿಯೋಜನೆ

ಎಸ್‌ಡಿಎಂ ಆವರಣಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಕಾಲೇಜಿನ ಸುತ್ತಲಿನ 500 ಮೀ. ವ್ಯಾಪ್ತಿಯ ಶಾಲೆ ಕಾಲೇಜುಗಳಿಗೆ ರವಿವಾರದವರೆಗೆ ರಜೆ ಘೋಷಿಸಲಾಗಿದೆ. ಈಗ ಸೋಂಕು ದೃಢಪಟ್ಟಿರುವ 182 ಜನರಲ್ಲಿ 25 ಜನ ಕಾಲೇಜಿನ ಸಿಬ್ಬಂದಿ ಮತ್ತು ವೈದ್ಯರಿದ್ದಾರೆ. ಸೋಂಕಿತರಲ್ಲಿ 6 ಜನರಿಗೆ ಮಾತ್ರ ರೋಗದ ಲಕ್ಷಣಗಳಿವೆ ಉಳಿದವರಲ್ಲಿ ಯಾವುದೇ ಲಕ್ಷಣಗಳು ಇಲ್ಲ.

ಆಸ್ಪತ್ರೆ ಹಾಗೂ ಕಾಲೇಜಿನಲ್ಲಿ ಸೇವೆ ಸಲ್ಲಿಸುವ ಎಲ್ಲ 3500 ಜನರ ಕೋವಿಡ್ ತಪಾಸಣೆ ಮಾಡಲಾಗುತ್ತಿದೆ. ಜೊತೆಗೆ ಶುಕ್ರವಾರ 200ಕ್ಕೂ ಹೆಚ್ಚು ರೋಗಿಗಳ ಸ್ವ್ಯಾಬ್ ಸಂಗ್ರಹಿಸಲಾಗಿದೆ. ಸ್ವ್ಯಾಬ್ ಸಂಗ್ರಹಕ್ಕೆ ಹುಬ್ಬಳ್ಳಿಯ 5, ಧಾರವಾಡದ 6 ಸೇರಿ ಒಟ್ಟು 11 ತಂಡಗಳನ್ನು ಜಿಲ್ಲಾಡಳಿತ ನಿಯೋಜಿಸಿದೆ.