ಕೈ' ಟಿಕೆಟ್: ಡಿಕೆಶಿ ಇಂದು ದೆಹಲಿಗೆ

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಸುಮಾರು 150 ಕ್ಷೇತ್ರಗಳಿಗೆ ಪಕ್ಷದ ಅಭ್ಯರ್ಥಿಗಳ ಹೆಸರನ್ನು ಸಂಕ್ರಾಂತಿ (ಜ.14) ಕಳೆಯುತ್ತಿದ್ದಂತೆ ಘೋಷಿಸಲು ತಯಾರಿ ನಡೆಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ವರಿಷ್ಠರ ಜೊತೆ ಸಮಾಲೋಚಿಸಲು ಬುಧವಾರ ದೆಹಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಬುಧವಾರ ಬೆಳಿಗ್ಗೆ ತುರುವೇಕೆರೆಯಲ್ಲಿ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಬಳಿಕ ದೆಹಲಿಗೆ ತೆರಳಲಿದ್ದಾರೆ. ರಾಹುಲ್ ಗಾಂಧಿ, ಕೆ.ಸಿ.ವೇಣುಗೋಪಾಲ್ ಮತ್ತು ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿ ಮಾಡಲಿದ್ದಾರೆ. ಒಟ್ಟಿಗೆ ಭೇಟಿ ಮಾಡಲಿದ್ದಾರೆಯೇ
ಅಥವಾ ಪ್ರತ್ಯೇಕವಾಗಿ ಭೇಟಿ ಮಾಡಲಿದ್ದಾರೆಯೇ ಎಂಬ ಬಗ್ಗೆ ಖಚಿತವಾಗಿಲ್ಲ' ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
'ಇದೇ 6ರಂದು ಅರಮನೆ ಮೈದಾನದಲ್ಲಿ ಪಕ್ಷದ 'ನಾ ನಾಯಕಿ' ಸಮಾವೇಶ ನಡೆಯಲಿದೆ. ಈ ಸಮಾವೇಶಕ್ಕೆ ಪ್ರಿಯಾಂಕಾ ಗಾಂಧಿ ಬರಬೇಕಿತ್ತು. ಆದರೆ, ಅದೇ ದಿನ ಅವರಿಗೆ ಬೇರೆ ಕಾರ್ಯಕ್ರಮ ಇರುವುದರಿಂದ ಜ. 8ರಂದು ಚಿ
ತ್ರದುರ್ಗದಲ್ಲಿ ಪಕ್ಷದ ವತಿಯಿಂದ ಪರಿಶಿಷ್ಟ ಜಾತಿ, ಪಂಗಡಗಳ ಐಕ್ಯತಾ ಸಮಾವೇಶಕ್ಕೆ ಆಹ್ವಾನಿಸಲು ಉದ್ದೇಶಿಸಲಾಗಿದೆ. ಪ್ರಿಯಾಂಕಾ ಗಾಂಧಿ ಅವರನ್ನು ರಾಜ್ಯಕ್ಕೆ ಕರೆದುಕೊಂಡು ಬರುವ ಬಗ್ಗೆಯೂ ಪಕ್ಷದ ನಾಯಕರ ಜೊತೆ ಶಿವಕುಮಾರ್ ಚರ್ಚೆ ನಡೆಸುವ ಸಾಧ್ಯತೆ ಇದೆ' ಎಂದೂ ಮೂಲಗಳು ಹೇಳಿವೆ.
ಸಮನ್ವಯ ಸಮಿತಿಗಳ ರಚನೆ
ಮುಂಬರುವ ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಪಕ್ಷದ ಹಿರಿಯ ನಾಯಕರು ಉತ್ತರ ಕರ್ನಾಟಕ
ಮತ್ತು ದಕ್ಷಿಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಅದರ ಯಶಸ್ಸಿಗೆ ಎರಡು ಪ್ರತ್ಯೇಕ ಸಮನ್ವಯ ಸಮಿತಿಗಳನ್ನು ಕೆಪಿಸಿಸಿ ರಚಿಸಿದೆ.
ಉತ್ತರ ಕರ್ನಾಟಕದಲ್ಲಿ ನಾಯಕರ ಪ್ರವಾಸವನ್ನು ವ್ಯವಸ್ಥಿತವಾಗಿ ಆಯೋಜಿಸಲು ಕೆಪಿಸಿಸಿ ಉಪಾಧ್ಯಕ್ಷ ಬಸವರಾಜ ರಾಯರಡ್ಡಿ ನೇತೃತ್ವದಲ್ಲಿ ಮತ್ತು ದಕ್ಷಿಣ ಕರ್ನಾಟಕ ಭಾಗದ ಜಿಲ್ಲೆಗಳ ಪ್ರವಾಸ ಉಸ್ತುವಾರಿಗೆ ಮತ್ತೊಬ್ಬ ಉಪಾಧ್ಯಕ್ಷ, ರಾಜ್ಯಸಭೆ ಸದಸ್ಯ ಜಿ.ಸಿ.ಚಂದ್ರಶೇಖರ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದೆ.
ರಾಯರಡ್ಡಿ ನೇತೃತ್ವದ ಸಮಿತಿಯಲ್ಲಿ ಪಕ್ಷದ ನಾಯಕರಾದ ವಿ.ಆರ್.ಸುದರ್ಶನ್, ಎನ್.ಎಸ್.ಬೋಸರಾಜ್, ಪ್ರಕಾಶ್ ರಾಠೋಡ್, ಆರ್.ಬಿ.ತಿಮ್ಮಾಪೂರ, ವೀರಕುಮಾರ್ ಪಾಟೀಲ್, ಅರವಿಂದ ಅರಳಿ ಸೇರಿ 21 ಮಂದಿ ಮತ್ತು ಎಲ್ಲ ಮುಂಚೂಣಿ ಘಟಕ, ಸೆಲ್, ವಿಭಾಗಗಳ ಅಧ್ಯಕ್ಷರು ಇದ್ದಾರೆ. ಜಿ.ಸಿ. ಚಂದ್ರಶೇಖರ್ ನೇತೃತ್ವದ ಸಮಿತಿಯಲ್ಲಿ ಕೆ. ಗೋವಿಂದರಾಜ್, ಎಚ್.ಎಂ. ರೇವಣ್ಣ, ಎಸ್. ರವಿ, ಮಂಜುನಾಥ ಭಂಡಾರಿ, ನಸೀರ್ ಅಹ್ಮದ್ ಸೇರಿದಂತೆ 28 ಮಂದಿ ಇದ್ದಾರೆ. ಜೊತೆಗೆ ಪಕ್ಷದ ಮುಂಚೂಣಿ ಘಟಕಗಳ ಅಧ್ಯಕ್ಷರೂ ಇದ್ದಾರೆ.
'ಪಕ್ಷದ ನಾಯಕರು ಕೈಗೊಳ್ಳುವ ರಾಜ್ಯ ಪ್ರವಾಸದ ಸಂದರ್ಭದಲ್ಲಿ ಕೆಪಿಸಿಸಿ ಉಸ್ತುವಾರಿ ಪದಾಧಿಕಾರಿಗಳು, 2023ರ ಟಿಕೆಟ್ ಆಕಾಂಕ್ಷಿಗಳು, ಬ್ಲಾಕ್ ಘಟಕಗಳ ಸಮನ್ವಯಕಾರರು, ಮುಂಚೂಣಿ ಮತ್ತು ಜಿಲ್ಲಾ ಘಟಕಗಳ ಮುಖ್ಯಸ್ಥರು ಜೊತೆಗೆ ಇರಬೇಕು' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೂಚಿಸಿದ್ದಾರೆ.