ಗುಪ್ತಾಂಗ ಮುಟ್ಟಿ ದೌರ್ಜನ್ಯವೆಸಗಿದ್ದ ಕಾಮುಕನಿಗೆ 20 ವರ್ಷ ಜೈಲು! ಚಾಮರಾಜನಗರ ಮಕ್ಕಳ ಸ್ನೇಹಿ ನ್ಯಾಯಾಲಯ ತೀರ್ಪು

ಗುಪ್ತಾಂಗ ಮುಟ್ಟಿ ದೌರ್ಜನ್ಯವೆಸಗಿದ್ದ ಕಾಮುಕನಿಗೆ 20 ವರ್ಷ ಜೈಲು! ಚಾಮರಾಜನಗರ ಮಕ್ಕಳ ಸ್ನೇಹಿ ನ್ಯಾಯಾಲಯ ತೀರ್ಪು

ಚಾಮರಾಜನಗರ: ಲೈಂಗಿಕ ದುರುದ್ದೇಶದಿಂದ 8 ವರ್ಷದ ಬಾಲಕಿಯ ಗುಪ್ತಾಂಗಕ್ಕೆ ಕೈ ಹಾಕಿ ದೌರ್ಜನ್ಯವೆಸಗಿದ್ದ ಕಾಮುಕನಿಗೆ ಮಕ್ಕಳ ಸ್ನೇಹಿ ಮತ್ತು 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 20 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 5 ಸಾವಿರ ರೂ.

ದಂಡ ವಿಧಿಸಿ ಶುಕ್ರವಾರ ತೀರ್ಪು ನೀಡಿದೆ.

ಯಳಂದೂರು ಪಟ್ಟಣದ ಮೊತ್ತದಕೇರಿ ಬೀದಿಯ ಮಹೇಶ್(28) ಶಿಕ್ಷೆಗೊಳಗಾದವ. ಈತ ತನ್ನ ಮನೆಗೆ ಟಿವಿ ನೋಡಲು ಬಂದಿದ್ದ 8 ವರ್ಷದ ಬಾಲಕಿ ಮೇಲೆ ಕೃತ್ಯವೆಸಗಿದ್ದ ಆರೋಪ ಹೊತ್ತಿದ್ದನು. ಈ ಸಂಬಂಧ ಯಳಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಯಳಂದೂರು ಆರಕ್ಷಕ ವೃತ್ತ ನಿರೀಕ್ಷಕ ಎ.ಕೆ.ರಾಜೇಶ್ ತನಿಖೆ ನಡೆಸಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಮಕ್ಕಳ ಸ್ನೇಹಿ ಮತ್ತು 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಎ.ಸಿ.ನಿಶಾರಾಣಿ ಅವರು, ಆರೋಪಿ ಮಹೇಶ್ ಕೃತ್ಯವೆಸಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಪೋಕ್ಸೋ ಕಾಯ್ದೆಯ ಕಲಂ 4ಕ್ಕೆ 20 ವರ್ಷ ಕಠಿಣ ಶಿಕ್ಷೆ, 5 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 6 ತಿಂಗಳ ಶಿಕ್ಷೆ, ಕಲಂ 8ಕ್ಕೆ 3 ವರ್ಷ ಶಿಕ್ಷೆ, 5 ಸಾವಿರ ರೂ. ದಂಡ, ದಂಡ ಕಟ್ಟಲಾಗದಿದ್ದರೆ 6 ತಿಂಗಳ ಶಿಕ್ಷೆ, ಕಲಂ 12ಕ್ಕೆ 1 ವರ್ಷ ಶಿಕ್ಷೆ, 5 ಸಾವಿರ ರೂ. ದಂಡ, ದಂಡ ಪಾವತಿಸಲಾಗದೆ ಇದ್ದರೆ 6 ತಿಂಗಳ ಶಿಕ್ಷೆ ವಿಧಿಸಿದ್ದಾರೆ.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ನೊಂದ ಬಾಲಕಿಗೆ 4 ಲಕ್ಷ ರೂ. ಪರಿಹಾರವನ್ನು 30 ದಿನಗಳ ಒಳಗೆ ನೀಡಬೇಕೆಂದು ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಕೆ.ಯೋಗೇಶ್ ವಾದ ಮಂಡಿಸಿದ್ದರು.