ಡಾ. ರಾಜ್‌ಕುಮಾರ್ ನಂದಿನಿ ಹಾಲಿನ ಉತ್ಪನ್ನ ಜಾಹೀರಾತು ವಿಡಿಯೋ ವೈರಲ್

ಡಾ. ರಾಜ್‌ಕುಮಾರ್ ನಂದಿನಿ ಹಾಲಿನ ಉತ್ಪನ್ನ ಜಾಹೀರಾತು ವಿಡಿಯೋ ವೈರಲ್

ಅಮೂಲ್ ಹಾಗೂ ನಂದಿನಿ ಸಂಸ್ಥೆಗಳು ಒಗ್ಗೂಡಿದರೆ ಪ್ರತಿ ಹಳ್ಳಿಯಲ್ಲಿ ಹಾಲಿನ ಡೈರಿಗಳನ್ನು ಸ್ಥಾಪನೆ ಮಾಡಬಹುದು ಎಂದು ಕೇಂದ್ರ ಗೃಹ ಸಚಿವರಾದ ಅಮಿತ್‌ ಶಾ ಹೇಳಿದ್ದಾರೆ. ಆದರೆ ಇದಕ್ಕೆ ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. 'ಸೇವ್ ನಂದಿನಿ' ಎನ್ನುವ ಅಭಿಯಾನ ಶುರು ಮಾಡಿದ್ದಾರೆ.

ಇಂತಹ ಹೊತ್ತಲ್ಲೇ ಅಣ್ಣಾವ್ರು ಕಾಣಿಸಿಕೊಂಡಿದ್ದ ನಂದಿನಿ ಹಾಲಿನ ಜಾಹೀರಾತು ವಿಡಿಯೋ ವೈರಲ್ ಆಗಿದೆ.

ಯಾವುದೇ ಉತ್ಪನ್ನ ತಯಾರಕರು ತಮ್ಮ ವಸ್ತುಗಳನ್ನು ಗ್ರಾಹಕರಿಗೆ ತಲುಪಿಸಲು ಜಾಹೀರಾತುಗಳ ಮೊರೆ ಹೋಗುತ್ತಾರೆ. ಗ್ರಾಹಕರನ್ನು ಸೆಳೆಯಲು ಸೆಲೆಬ್ರೆಟಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಸಿನಿಮಾ ನಟ ನಟಿಯರು, ಕ್ರಿಕೆಟ್ ಆಟಗಾರರು, ರೂಪದರ್ಶಿಗಳು ರಾಯಭಾರಿಗಳಾಗುತ್ತಾರೆ. ಆದರೆ ಡಾ. ರಾಜ್‌ಕುಮಾರ್ ಮಾತ್ರ ಯಾವುದೇ ಜಾಹೀರಾತುಗಳಲ್ಲೂ ನಟಿಸುತ್ತಿರಲಿಲ್ಲ. ಕೋಟ್ಯಂತರ ಅಭಿಮಾನಿಗಳ ಆರಾಧ್ಯ ದೈವನಾದರೂ ಇಂತಹ ಸಾಹಸ ಮಾಡಲಿಲ್ಲ. ಸಾಕಷ್ಟು ಉತ್ಪನ್ನಗಳಿಗೆ ರಾಯಭಾರಿ ಆಗುವಂತೆ ಕೇಳಿದರೂ ಒಪ್ಪಲಿಲ್ಲ.

1997- 98ರ ಸಮಯದಲ್ಲಿ ಕರ್ನಾಟಕದ ರಾಜ್ಯ ಹಾಲು ಉತ್ಪಾದಕರ ಸಹಕಾರ ಸಂಘದವರು 'ನಂದಿನಿ' ಸುವಾಸಿತ ಹಾಲು ಬಿಡುಗಡೆ ಮಾಡಲು ಮುಂದಾಗಿದ್ದರು. ಬೇರೆ ಕಂಪನಿಗಳ ಫ್ಲೇವರ್ಡ್ ಹಾಲಿಗಿಂತ ನಂದಿನಿ ಹಾಲನ್ನು ಹೆಚ್ಚು ಮಾರಾಟ ಮಾಡಲು ಅಣ್ಣಾವ್ರ ಸಹಾಯ ಕೇಳಿದ್ದರು. ಆಗ ಎಸ್. ಎ ಪ್ರೇಮನಾಥ್ ಕರ್ನಾಟಕದ ರಾಜ್ಯ ಹಾಲು ಉತ್ಪಾದಕ ಡೈರಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಅವರು ಡಾ. ರಾಜ್‌ಕುಮಾರ್‌ಗೆ ಬಹಳ ಆಪ್ತರಾಗಿದ್ದರು. ಹಾಗಾಗಿ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವಂತೆ ಒಪ್ಪಿಸುವಲ್ಲಿ ಯಶಸ್ವಿ ಆಗಿದ್ದರು.

ರೈತರಿಗೆ ಸಹಾಯ ಆಗುತ್ತದೆ ಎನ್ನುವುದಾದರೆ ನಾನ್ಯಾಕೆ ಜಾಹೀರಾತಿನಲ್ಲಿ ನಟಿಸಬಾರದು? ಎಂದು ಅಣ್ಣಾವ್ರು ಹೇಳಿದ್ದರು. ಇದಕ್ಕಾಗಿ ಯಾವುದೇ ಹಣ ಸ್ವೀಕರಿಸಿರಲಿಲ್ಲ. ನಟಸಾರ್ವಭೌಮ ಉಚಿತವಾಗಿ ನಂದಿನಿ ಉತ್ಪನ್ನಗಳಿಗೆ ರಾಯಭಾರಿ ಆಗಿದ್ದರು. ನಂತರ ಪುನೀತ್ ರಾಜ್‌ಕುಮಾರ್ ಇದನ್ನು ಮುಂದುವರೆಸಿದ್ದರು. ಆಗ ಅಣ್ಣಾವ್ರು ರಸಸಂಜೆ ಕಾರ್ಯಕ್ರಮಗಳಲ್ಲಿ ವೇದಿಕೆ ಏರಿ ಹಾಡುಗಳನ್ನು ಹಾಡುತ್ತಿದ್ದರು. ವೇದಿಕೆ ಮೇಲೆ ಹಾಡು ಹಾಡಿ ನಂತರ ನಂದಿನಿ ಫ್ಲೇವರ್ಡ್ ಹಾಲು ಸೇವಿಸಿ "ಬಹಳ ರುಚಿಯಾಗಿದೆ. ಎಲ್ಲರೂ ಉಪಯೋಗಿಸಬಹುದು" ಎಂದು ಹೇಳಿದ್ದರು. ಈ ಜಾಹೀರಾತಿನಲ್ಲಿ ಶಿವಣ್ಣ, ರಾಘಣ್ಣನನ್ನು ನೋಡಬಹುದು. ಸದ್ಯ ಈಗ ಮತ್ತೊಮ್ಮೆ ಈ ವಿಡಿಯೋ ವೈರಲ್ ಆಗಿದೆ.