ಬಾಬರ್ ಅಜಂಗಿಂತ ಸ್ಮೃತಿ ಮಂಧಾನ ಸಂಭಾವನೆ ದುಪ್ಪಟ್ಟು; IPL ಜೊತೆ PSL ಹೋಲಿಕೆ ಮೂರ್ಖತನ

ಸೋಮವಾರ, ಫೆಬ್ರವರಿ 13ರಂದು ಮಹಿಳಾ ಕ್ರಿಕೆಟ್‌ಗೆ ನೆನಪಿನಲ್ಲಿಡಬಹುದಾದ ಐತಿಹಾಸಿಕ ದಿನವಾಗಿದ್ದು, ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆ ಮುಂಬೈನಲ್ಲಿ ನಡೆಯಿತು. ಒಟ್ಟು 449 ಆಟಗಾರ್ತಿಯರು ಹರಾಜು ಪಟ್ಟಿಯಲ್ಲಿ ಸೇರಿದ್ದರು.
ಉದ್ಘಾಟನಾ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯಾವಳಿಯು ಮಾರ್ಚ್ 4ರಿಂದ ಮಾರ್ಚ್ 26ರವರೆಗೆ ನಡೆಯಲಿದೆ.
ಮುಂಬೈ ಮೂಲದ ಸ್ಮೃತಿ ಮಂಧಾನಗಾಗಿ ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು. ಎರಡೂ ತಂಡಗಳು ಬಹುಬೇಡಿಕೆಯ ಆಟಗಾರ್ತಿಯನ್ನು ಪಡೆದುಕೊಳ್ಳಲು ಹವಣಿಸಿದವು. ಹೀಗಾಗಿ ಸ್ಮೃತಿ ಮಂಧಾನ ಬೆಲೆ ಏರುತ್ತಲೇ ಹೋಯಿತು. ಅಂತಿಮವಾಗಿ ಬೆಂಗಳೂರು ಮೂಲದ ಆರ್‌ಸಿಬಿ ಫ್ರಾಂಚೈಸಿ ಮಹಿಳಾ ಪ್ರೀಮಿಯರ್ ಲೀಗ್ 2023ರ ಹರಾಜಿನ ಅತ್ಯಂತ ದುಬಾರಿ ಆಟಗಾರ್ತಿಯಾಗಿ ಖರೀದಿಸಿದರು.
ಬಾಬರ್ ಅಜಂ ಸಂಭಾವನೆಗಿಂತ ಎರಡೂವರೆ ಪಟ್ಟು ಹೆಚ್ಚು
ಕುತೂಹಲಕಾರಿ ಸಂಗತಿಯೆಂದರೆ, ಸ್ಮೃತಿ ಮಂಧಾನ ಅವರ ಮಹಿಳಾ ಪ್ರೀಮಿಯರ್ ಲೀಗ್ 2023ರ ಸಂಭಾವನೆ 3.4 ಕೋಟಿ ರೂ.ಗಳಾಗಿದ್ದು, ಇದು ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಅವರ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ಸಂಭಾವನೆಗಿಂತ ಎರಡೂವರೆ ಪಟ್ಟು ಹೆಚ್ಚಾಗಿದೆ.
2023ರ ಪಿಎಸ್‌ಎಲ್‌ನಲ್ಲಿ ಪೇಶಾವರ್ ಝಲ್ಮಿ ತಂಡವನ್ನು ಪ್ರತಿನಿಧಿಸುವ ಇನ್‌ಫಾರ್ಮ್ ಪಾಕಿಸ್ತಾನದ ಬ್ಯಾಟ್ಸ್‌ಮನ್ ಬಾಬರ್ ಅಜಂ 1.38 ಕೋಟಿ ರೂ. ಸಂಭಾವನೆಯನ್ನು ಪಡೆಯಲಿದ್ದಾರೆ. ಇದು ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆರ್‌ಸಿಬಿ ಪರ ಆಡುತ್ತಿರುವ ಸ್ಮೃತಿ ಮಂಧಾನ ಪಡೆಯುವುದಕ್ಕಿಂತ ಕಡಿಮೆ ಮೊತ್ತವಾಗಿದೆ.
ಪಿಎಸ್‌ಎಲ್ ಭಾರತದ ಮಹಿಳಾ ಪ್ರೀಮಿಯರ್ ಲೀಗ್‌ಗೂ ಸಮವಿಲ್ಲ
ಹೀಗಾಗಿ, ಭಾರತದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಗಿಂತ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ಅತ್ಯುತ್ತಮ ಮತ್ತು ಶ್ರೀಮಂತ ಕ್ರಿಕೆಟ್ ಲೀಗ್ ಎಂದು ಹೇಳುವವರಿಗೆ ತಿರುಗೇಟು ನೀಡಿದಂತಾಗಿದೆ.
ಈ ಹಿಂದೆ ಪಾಕಿಸ್ತಾನ ಮಾಜಿ ಕ್ರಿಕೆಟಿಗರು ಪಿಎಸ್‌ಎಲ್ ಅನ್ನು ಐಪಿಎಲ್ ಜೊತೆಗೆ ಮಾಡಿದ್ದರು. ಇದೀಗ ಬಾಬರ್ ಅಜಂ ಮತ್ತು ಸ್ಮೃತಿ ಮಂಧಾನ ನಡುವಿನ ಸಂಭಾವನೆ ಅಂತರವನ್ನು ನೋಡಿದರೆ, ಪಿಎಸ್‌ಎಲ್ ಭಾರತದ ಮಹಿಳಾ ಪ್ರೀಮಿಯರ್ ಲೀಗ್‌ಗೂ ಸಮವಿಲ್ಲ ಎಂದು ಹೇಳಬಹುದು.
ಟ್ರೋಲ್‌ಗೊಳಗಾದ ಬಾಬರ್ ಅಜಂ
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬಾಬರ್ ಅಜಂ ಮತ್ತು ಸ್ಮೃತಿ ಮಂಧಾನ ನಡುವಿನ ಸಂಭಾವನೆ ಅಂತರವನ್ನು ಮೀಮ್ಸ್ ಮೂಲಕ ಟ್ರೋಲ್ ಮಾಡಲಾಗುತ್ತಿದೆ. ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ಅನ್ನು ಭಾರತದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಜೊತೆ ಹೋಲಿಕೆ ಮಾಡುವವರು ಮೂರ್ಖರು ಎಂದು ತಿರುಗೇಟು ನೀಡಿದ್ದಾರೆ.
ಸ್ಮೃತಿ ಮಂಧಾನ ಸೇರಿದಂತೆ ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ರೇಣುಕಾ ಸಿಂಗ್ ಮತ್ತು ರಿಚಾ ಘೋಷ್ ಅವರಂತಹ ದೊಡ್ಡ ಆಟಗಾರ್ತಿಯರು ಆರ್‌ಸಿಬಿ ತಂಡದಲ್ಲಿರುವುದರಿಂದ ಈ ಬಾರಿಯಾದರೂ ಆರ್‌ಸಿಬಿಯ ಪ್ರಶಸ್ತಿ ಬರ ಕೊನೆಗೊಳ್ಳಲಿದೆ ಎಂದು ಅಭಿಮಾನಿಗಳು ಆಶಾವಾದ ಹೊಂದಿದ್ದಾರೆ.
ಆರ್‌ಸಿಬಿ ಖರೀದಿಸಿದ ಆಟಗಾರ್ತಿಯರ ಸಂಪೂರ್ಣ ಪಟ್ಟಿ ಮತ್ತು ಬೆಲೆ
ಸ್ಮೃತಿ ಮಂಧಾನ (3.4 ಕೋಟಿ ರೂ.), ಸೋಫಿ ಡಿವೈನ್ (50 ಲಕ್ಷ ರೂ.), ಎಲ್ಲಿಸ್ ಪೆರ್ರಿ (1.7 ಕೋಟಿ ರೂ.), ರೇಣುಕಾ ಸಿಂಗ್ (1.5 ಕೋಟಿ ರೂ.), ರಿಚಾ ಘೋಷ್ (1.9 ಕೋಟಿ ರೂ.), ಎರಿನ್ ಬರ್ನ್ಸ್ (30 ಲಕ್ಷ ರೂ.), ದಿಶಾ ಕಸತ್ (10 ಲಕ್ಷ ರೂ.), ಇಂದ್ರಾಣಿ ರಾಯ್ (10 ಲಕ್ಷ ರೂ.), ಶ್ರೇಯಾಂಕ ಪಾಟೀಲ್ (10 ಲಕ್ಷ ರೂ.), ಕನಿಕಾ ಅಹುಜಾ (35 ಲಕ್ಷ ರೂ.), ಆಶಾ ಶೋಬನಾ (10 ಲಕ್ಷ ರೂ.), ಹೀಥರ್ ನೈಟ್ (40 ಲಕ್ಷ ರೂ.), ಡೇನ್ ವ್ಯಾನ್ ನೀಕರ್ಕ್ (30 ಲಕ್ಷ ರೂ.), ಪ್ರೀತಿ ಬೋಸ್ (30 ಲಕ್ಷ ರೂ.), ಪೂನಂ ಖೇಮ್ನಾರ್ (10 ಲಕ್ಷ ರೂ.), ಕೋಮಲ್ ಜಂಜಾದ್ (25 ಲಕ್ಷ ರೂ.).