ಉತ್ತಮ ವಾಯು ಗುಣಮಟ್ಟವುಳ್ಳ ಜಿಲ್ಲೆಗಳಲ್ಲಿ ಮಡಿಕೇರಿ ದೇಶದಲ್ಲೇ ನಂ. 1, ಗದಗಕ್ಕೆ 2ನೇ ಸ್ಥಾನ

ದೇಶದಲ್ಲೇ ಉತ್ತಮ ವಾಯುಗುಣಮಟ್ಟವುಳ್ಳ ನಗರಗಳಲ್ಲಿ ರಾಜ್ಯದ ನಗರಗಳಿಗೆ ಮೊದಲ ಎರಡು ಸ್ಥಾನ ದೊರಕಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (Central Pollution Control Board)(CPCB) ದೈನಂದಿನ ಬುಲೆಟಿನ್ ಬಿಡುಗಡೆಯಾಗಿದ್ದು, ಈ ಪೈಕಿ ರಾಜ್ಯದ ಮಡಿಕೇರಿಯ ವಾಯು ಗುಣಮಟ್ಟ ಸೂಚ್ಯಂಕ (Air Quality Index)(AQI) ಮೌಲ್ಯ 19 ಎಂದು ತಿಳಿದುಬಂದಿದ್ದು, ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. ಇನ್ನು, ಉತ್ತಮ ಗಾಳಿಯ ಗುಣಮಟ್ಟ ಹೊಂದಿರುವ ದೇಶದ ಪ್ರಮುಖ ನಗರಗಳಲ್ಲಿ ಕರ್ನಾಟಕದ ಗದಗ ಎರಡನೇ ಸ್ಥಾನದಲ್ಲಿದ್ದು, ಅದರ AQI ಮೌಲ್ಯ 22 ಆಗಿದೆ.
ಇನ್ನು, ಗದಗ ಹೊರತುಪಡಿಸಿ ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳು 'ಉತ್ತಮ' AQI ವಿಭಾಗದಲ್ಲಿ ಸೇರಿವೆ. ಹುಬ್ಬಳ್ಳಿ (35), ಬಾಗಲಕೋಟೆ (23), ಯಾದಗಿರಿ (30) ಮತ್ತು ಬೀದರ್ (41) ಈ ವಿಭಾಗದಲ್ಲಿವೆ. ಈ ವರ್ಷ ಜೂನ್ 5 ಮತ್ತು ಜುಲೈ 6 ರಂದು ಗದಗ ರಾಷ್ಟ್ರದಾದ್ಯಂತ ಮೊದಲ ಸ್ಥಾನದಲ್ಲಿತ್ತು. ಅಂದಿನಿಂದ, ಇದು 'ಉತ್ತಮ' ಮತ್ತು 'ಸರಾಸರಿ' ವಿಭಾಗದಲ್ಲಿದೆ.
ಇನ್ನೊಂದೆಡೆ, 'ಉತ್ತಮ' ವಾಯು ಗುಣಮಟ್ಟ ವಿಭಾಗದಲ್ಲಿರುವ ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಚಾಮರಾಜನಗರ (44), ಚಿಕ್ಕಮಗಳೂರು (33), ದಾವಣಗೆರೆ (23), ಹಾಸನ (25), ಕೊಪ್ಪಳ (46), ಕೋಲಾರ (50), ಮೈಸೂರು (29), ರಾಮನಗರ (40), ಶಿವಮೊಗ್ಗ (37) ಮತ್ತು ವಿಜಯಪುರ (45) ಸೇರಿವೆ.
ಪ್ರಮುಖ ಮಾಲಿನ್ಯಕಾರಕಗಳ ಸಾಂದ್ರತೆ ಅವಲಂಬಿಸಿ AQI ಮೌಲ್ಯವನ್ನು ಅಳೆಯುವ 500 ಪಾಯಿಂಟ್ ಸ್ಕೇಲ್ ಅನ್ನು ಭಾರತ ಅನುಸರಿಸುತ್ತದೆ. 0-50 ಮೌಲ್ಯವನ್ನು ಉತ್ತಮವೆಂದು ಪರಿಗಣಿಸಲಾಗುತ್ತದೆ. ನಂತರ ತೃಪ್ತಿದಾಯಕ (51-100), ಮಧ್ಯಮ (101-200), ಕಳಪೆ (201- 300), ಅತ್ಯಂತ ಕಳಪೆ (301- 400) ಮತ್ತು ತೀವ್ರ (401-500) ಎಂದು ವರ್ಗೀಕರಿಸಲಾಗುತ್ತದೆ.
ಗದಗ 'ಉತ್ತಮ' ಗಾಳಿಯ ಗುಣಮಟ್ಟದ ಟ್ಯಾಗ್ ಅನ್ನು ಗಳಿಸಲು ಹತ್ತಿರದ ಬೆಟ್ಟದ ಶ್ರೇಣಿ, ಕಪ್ಪತಗುಡ್ಡ ಮತ್ತು ಕಡಿಮೆ ಸಂಖ್ಯೆಯ ಕೈಗಾರಿಕೆಗಳಿಗೆ ಕಾರಣವಾಗಿದೆ. ಹೆಚ್ಚಿನ ಶೇಕಡಾವಾರು ಹಳ್ಳಿಗರು ಕೃಷಿಯಲ್ಲಿ ತೊಡಗಿರುವ ಕಾರಣ, ಇದು ಕಡಿಮೆ ವಾಯು ಮಾಲಿನ್ಯ ಉಂಟುಮಾಡುತ್ತದೆ.
ಇನ್ನು, ಈ ಸಂಬಂಧ ಮಾತನಾಡಿದ ಗದಗ ಮತ್ತು ಧಾರವಾಡ ಜಿಲ್ಲೆಯ ಪರಿಸರ ಅಧಿಕಾರಿ ಶೋಭಾ ಪೋಳ್, ''ನಾವು AQI ಮೌಲ್ಯವನ್ನು ಗಮನಿಸುತ್ತಿದ್ದು, ಈ ಬಾರಿ ಕರ್ನಾಟಕದ ಹಲವು ಜಿಲ್ಲೆಗಳು ಉತ್ತಮ ವಿಭಾಗದಲ್ಲಿವೆ. ಈ ಹಿಂದೆ ಇಲ್ಲದ ಪಟ್ಟಿಯಲ್ಲಿ ಹುಬ್ಬಳ್ಳಿ ಸೇರಿದೆ. ವಿವರವಾದ ಅಧ್ಯಯನ ಮತ್ತು ಸಮೀಕ್ಷೆಯ ಅಗತ್ಯವಿರುವುದರಿಂದ ಕಾರಣಗಳನ್ನು ಊಹಿಸಲು ಸಾಧ್ಯವಿಲ್ಲ'' ಎಂದು ಪ್ರತಿಕ್ರಿಯೆ ನೀಡಿದ್ದಾರೆ.