ಕೋಲಾರಕ್ಕೆ ತೆರಳಿದ ಮಾಜಿ ಸಿಎಂ ಸಿದ್ದರಾಮಯ್ಯ : ಇಂದು `ಮಹಿಳಾ ಸಮಾವೇಶ'ದಲ್ಲಿ ಭಾಗಿ

ಕೋಲಾರ : ಮುಂದಿನ ವಿಧಾನಸಭೆ ಚುನಾವಣೆಗೆ ಕೋಲಾರ ಕ್ಷೇತ್ರದಿಂದ ಸ್ಪರ್ಧಿಗೆ ನಿರ್ಧರಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಮತ್ತೆ ಕೋಲಾರ ಕ್ಷೇತ್ರದ ಪ್ರವಾಸ ಕೈಗೊಂಡಿದ್ದು, ವೇಮಗಲ್ ನಲ್ಲಿ ನಡೆಯುವ ಮಹಿಳಾ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.
ಈಗಾಗಲೇ ಬೆಂಗಳೂರಿನಿಂದ ಕೋಲಾರಕ್ಕೆ ತೆರಳಿರುವ ಮಾಜಿ ಸಿಎಂ ಸಿದ್ದರಾಮಯ್ಯ ಇಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡ ನೇತೃತ್ವದಲ್ಲಿ ಕೋಲಾರ ತಾಲೂಕು ವೇಮಗಲ್ ನಲ್ಲಿ ಮಹಿಳಾ ಸಮಾವೇಶ ಹಮ್ಮಿಕೊಂಡಿದ್ದು, ಸಮಾವೇಶದಲ್ಲಿ ಸುಮಾರು 15-20 ಸಾವಿರ ಮಹಿಳೆಯರು ಸೇರಲಿದ್ದಾರೆ ಎನ್ನಲಾಗಿದೆ.
ಇನ್ನು ಮಹಿಳಾ ಸಮಾವೇಶಕ್ಕೆ ಬಿಜೆಪಿ ಅಭ್ಯರ್ಥಿ ವರ್ತೂರ್ ಪ್ರಕಾಶ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದು, ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡ ಅವರು ಕಾರ್ಯಕ್ರಮಕ್ಕೆ ಬರುವವರಿಗೆ ರೇಷ್ಮೇ ಸೀರೆ, ಚಿನ್ನದ ಮೂಗುತಿ, ತಲಾ 500 ರೂ ಉಡುಗೊರೆ ನೀಡುತ್ತಿದ್ದಾರೆ. ಈಗಾಗಲೇ ಸ್ವಸಹಾಯ ಸಂಘಗಳ ಸಭೆ ಮಾಡಿ ಮೌಖಿಕ ಆದೇಶ ನೀಡಿದ್ದಾರೆ. ಕಾರ್ಯಕ್ರಮಕ್ಕೆ ಮಹಿಳೆಯರನ್ನು ಸೇರಿಸುತ್ತಿರುವ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಸಹಕಾರಿ ಕ್ಷೇತ್ರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.